ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ
ಉಡುಪಿ, ಜು.30: ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರ ಮತ್ತು ತುಳುಕೂಟ ಉಡುಪಿ ಸಹಯೋಗದಲ್ಲಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ನೆನಪಿನಲ್ಲಿ ಕಿನ್ಯ ಜೋಕ್ಲೆಡ್ದ್ ಸೊರ ಸಂಪು ಕಾರ್ಯಕ್ರಮವನ್ನು ಉಡುಪಿಯ ಮುಕುಂದ ಕೃಪಾ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಯ್ಯಾರ ಕಿಞ್ಞಣ್ಣ ರೈ ಬರೆದ ಪದ್ಯವನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರ. ಕನ್ನಡ ಮತ್ತು ತುಳು ಭಾಷೆಗೆ ಅಪಾರವಾದ ಕೊಡುಗೆ ನೀಡಿದ ಕರ್ನಾಟಕದ ಮಹಾಕವಿ, ಹಿರಿಯ ಸಾಹಿತಿ, ಬಹು ಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯಾಗಿ ನಾಯಕ ಕಿಞ್ಞಣ್ಣ ರೈ ಅವರನ್ನು ಈ ನಾಡಿನ ಜನತೆ ಎಂದಿಗೂ ಮರೆಯಬಾರದು ಎಂದರು.
ತುಳುಕೂಟದ ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ, ತುಳುಕೂಟದ ಗೌರವ ಸಲಹೆಗಾರ ವಿಶ್ವನಾಥ ಶೆಣೈ, ರೇಡಿಯೋ ಮಣಿಪಾಲದ ಕಾರ್ಯಕ್ರಮ ಸಂಯೋಜಕ ಡಾ.ರಶ್ಮಿ ಅಮ್ಮೆಂಬಳ, ಮುಕುಂದ ಕೃಪಾ ಶಾಲೆಯ ಪ್ರಾಂಶುಪಾಲೆ ವಿನುತಾ ಎಸ್.ನಾಯಕ್ ಮಾತನಾಡಿದರು.
ಕಾರ್ಯಕ್ರಮದ ಸಂಚಾಲಕಿ ವಿದ್ಯಾ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, ತುಳು ಭಾಷೆ ಸಂಸ್ಕೃತಿ ಉಳಿವಿಗಾಗಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಉಡುಪಿಯ ಎಲ್ಲ ಶಾಲೆಗಳಲ್ಲಿ ಈ ಕಾರ್ಯ ಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ತುಳುಕೂಟದ ಕಾರ್ಯಕಾರಿ ಸಮಿತಿಯ ಸದಸ್ಯೆ ಪ್ರಭಾವತಿ ವಿಶ್ವನಾಥ್ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಯಶೋದಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳು ತುಳು ಕಥೆ, ಗಾದೆ, ಕವಿತೆ ಹಾಗೂ ಪದ್ಯವನ್ನು ಹೇಳಿ ರಂಜಿಸಿದರು.