ಕೇಂದ್ರದ ಕಾನೂನಿಂದ ಬೀಡಿ ಕಾರ್ಮಿಕರಿಗೆ ಸಂಕಷ್ಟ: ಜೆ.ಬಾಲಕೃಷ್ಣ ಶೆಟ್ಟಿ

ಉಡುಪಿ ಬೀಡಿ ಕಾರ್ಮಿಕರ ಯೂನಿಯನ್‌ನ ವಾರ್ಷಿಕ ಮಹಾಸಭೆ

Update: 2026-08-09 19:44 IST

ಉಡುಪಿ, ಆ.9: ಕೇಂದ್ರ ಸರಕಾರ ಜಾರಿಗೆ ತಂದಿರುವ ನಾಲ್ಕು ಲೇಬರ್ ಕೋಡ್‌ಗಳಿಂದ ಇವತ್ತು ಬೀಡಿ ಕಾರ್ಮಿಕರು ಹಲವಾರು ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯದಿಂದ ಕೇಂದ್ರಕ್ಕೆ ಹೋಗಿರುವುದರಿಂದ ಬೀಡಿ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ ಸರಿಯಾಗಿ ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್‌ನ ರಾಜ್ಯಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

ಉಡುಪಿ ಬನ್ನಂಜೆ ಶ್ರೀನಾರಾಯಣ ಗುರು ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯೂನಿಯನ್ ಉಡುಪಿ(ಸಿಐಟಿಯು) ಇದರ 45 ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರ್ಮಿಕರಿಗೆ ಬೀಡಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆಗಳು ಹಾಗೂ ಡಿಸ್ಪೇನ್ಷರಿಗಳಲ್ಲಿ ಔಷಧಿಗಳು ಸಿಗುತ್ತಿಲ್ಲ. ಮನೆ ಕಟ್ಟಲು ಸಹಾಯಧನ, ಆರೋಗ್ಯಕ್ಕೆ ಸಹಾಯ ಧನ ಕೂಡ ದೊರೆಯುತ್ತಿಲ್ಲ. ಇನ್ನೊಂದು ಕಡೆ ರಾಜ್ಯ ಸರಕಾರಗಳು ಬೀಡಿ ಕಾರ್ಮಿಕರ ವೇತನ ಹೆಚ್ಚಳ ಮಾಡುತ್ತಿಲ್ಲ. ಬದಲಾಗಿ ಬೀಡಿ ಕಂಪನಿಯ ಮಾಲಿಕರ ಜೊತೆ ಕೆಲವು ಒಪ್ಪಂದ ಮಾಡಿಕೊಂಡಂತಿದೆ. ಅದ್ದರಿಂದ ಇವತ್ತು ಬೀಡಿ ಕಾರ್ಮಿಕರು ಬೀದಿ ಪಾಲಾಗುವಂತಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಜೀವನ ಮಟ್ಟ ಸುಧಾರಣೆಗೆ ಬಹಳ ದೊಡ್ಡ ಕೊಡುಗೆಯನ್ನು ಬೀಡಿ ಕೈಗಾರಿಕೆ ನೀಡಿದೆ. ಕೇವಲ ಮೂರು ತಿಂಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೇ ಉಳಿದ ತಿಂಗಳು ಬೀಡಿಯನ್ನೇ ನಂಬಿ ಜೀವನ ಸಾಗಿಸುವವರು ನಮ್ಮಲ್ಲಿ ತುಂಬಾ ಇದ್ದಾರೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಇಂದಿಗೂ ಲಕ್ಷಾಂತರ ಜನರು ಕೂಡ ಬೀಡಿ ಕಟ್ಟುವವರು ಇದ್ದಾರೆ. ಆದರೆ ಇವತ್ತು ಬೀಡಿ ಕೆಲಸ ಕಡಿಮೆಯಾಗಿದೆ. ಸರಕಾರವೇ ಅದರ ಬಗ್ಗೆ ಜಾಗೃತಿ ಮೂಡಿಸಿ ಕೆಲಸ ಇಲ್ಲದಂತೆ ಮಾಡುತ್ತಿದೆ ಎಂದರು.

ಬೀಡಿ ಕಾರ್ಮಿಕರು ಇಂದು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 79ವರ್ಷ ಗಳಾದರೂ ನಮ್ಮ ಪರಿಸ್ಥಿತಿ ಈಗಲೂ ಅದೇ ರೀತಿ ಇದೆ. ನಮ್ಮನ್ನು ಆಳುವವರು ಬಂಡವಾಳಶಾಹಿ, ಕಂಪೆನಿ ಮಾಲಕರ ಪರವಾಗಿಯೇ ಆಡಳಿತ ಮಾಡುತ್ತ ಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ, ಮನೆ, ಆಹಾರ, ಆರೋಗ್ಯ ನೀಡುವುದು ಸ್ವಾತಂತ್ರ್ಯದ ಕಲ್ಪನೆ ಆಗಿತ್ತು. ಆದರೆ ಅದು ಯಾವುದು ಕೂಡ ಇಂದಿಗೂ ಕಾರ್ಯಗತವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಶಶಿಧರ್ ಗೊಲ್ಲ, ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಜಿಲ್ಲಾ ಕೋಶಾಧಿಕಾರಿ ಬಲ್ಕೀಸ್ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಬೀಡಿ ಎಂಡ್ ಟೋಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷೆ ನಳಿನಿ ಎಸ್. ವಹಿಸಿದ್ದರು. ಕಾರ್ಯ ದರ್ಶಿ ಉಮೇಶ್ ಕುಂದರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಜ್ಯೋತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News