ಕುಂದಾಪುರ: ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳ್ಳತನ
ಕುಂದಾಪುರ, ಆ.13: ಮನೆಯಲ್ಲಿ ಯಾರೂ ಇಲ್ಲದ್ದನ್ನು ತಿಳಿದು, ಎದುರಿನ ಬಾಗಿಲು ಮುರಿದು, ಒಳ ನುಗ್ಗಿದ ಕಳ್ಳರು ಚಿನ್ನ, ನಗದನ್ನು ಕಳ್ಳತನ ನಡೆಸಿದ ಘಟನೆ ಗುರುವಾರ ಬೆಳಗ್ಗೆ ಕುಂದಾಪುರದ ಬೊಬ್ಬರ್ಯನಕಟ್ಟೆ ಎದುರಿನ ಮನೆಯೊಂದರಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಬೊಬ್ಬರ್ಯನಕಟ್ಟೆ ಎದುರಿನ ಶಾರದಾ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಪುತ್ರ ವಿಜಯ್ ನವೀನ್ ಕುಮಾರ್ ಅವರು ತಾಯಿಯನ್ನು ಕೋಟದಲ್ಲಿರುವ ತನ್ನ ದೊಡ್ಡಮ್ಮನ ಮನೆಯಲ್ಲಿ ಬಿಟ್ಟು ಆ.8ರಂದು ಮುಂಬಯಿಗೆ ತೆರಳಿದ್ದರು. ಆ.13 ರ ಬೆಳಗ್ಗೆ ವಿಜಯ್ ಅವರು ವಾಪಾಸು ಮನೆಗೆ ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.
ಮನೆಯ ಎದುರಿನ ಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಮುರಿದು, ಒಳ್ಳ ನುಗ್ಗಿದ ಕಳ್ಳರು, ಗೋದ್ರೇಜ್‌ನಲ್ಲಿದ್ದ ಸುಮಾರು 8 ಗ್ರಾಂ ತೂಕದ ಚಿನ್ನಾಭರಣ ಹಾಗೂ ವಿದೇಶಿ ಕರೆನ್ಸಿ ಸೇರಿ ಅಂದಾಜು 95 ಸಾವಿರ ರೂ. ಮೌಲ್ಯದ ಚಿನ್ನ, ನಗದು ಕಳ್ಳತನ ಮಾಡಿ, ಪರಾರಿಯಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ ಗೌಡ, ನಗರ ಠಾಣಾ ಪಿಎಸ್ ಐ ಪುಷ್ಪಾ ಹಾಗೂ ಸಿಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.