ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಿದವರು ಅರಸು: ಎಂ.ಎ. ಗಫೂರ್
ಉಡುಪಿ, ಆ.20: ಸಾಮಾಜಿಕ ನ್ಯಾಯದ ಹರಿಕಾರರಾದ ಡಿ.ದೇವರಾಜ ಅರಸು ತಮ್ಮ ಆಡಳಿತದ ಅವಧಿಯಲ್ಲಿ ಸಮಸಮಾಜ ನಿರ್ಮಾಣದ ರೂವಾರಿಯಾಗಿ, ಹಿಂದುಳಿದ ವರ್ಗದವರ ಹಾಗೂ ದೀನ ದಲಿತರ ಏಳಿಗೆಗೆ ಧ್ವನಿ ಯಾಗಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯೊಂದಿಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದ್ದಾರೆ.
ನಗರದ ಮಿಷನ್ ಕಂಪೌಂಡ್‌ನ ಬಡಗುಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ಪರಿವರ್ತನೆಯ ಹರಿಕಾರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದರು. ದೇವರಾಜ ಅರಸು ಅದನ್ನು ಮುಂದುವರಿಸಿಕೊಂಡು ಹೋಗುವುದರೊಂದಿಗೆ ಡಾ.ಬಿ.ಆರ್ ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಇಂದಿನ ಯುವಜನತೆ ದೇವರಾಜ ಅರಸು ಅವರನ್ನು ನೋಡಿಲ್ಲವಾದದೂ ಸಹ ಅವರು ಜಾರಿಗೆ ತಂದಿರುವ ಸಾಮಾಜಿಕ ಕಾರ್ಯಕ್ರಮಗಳು ನಮ್ಮ ಕಣ್ಣ ಮುಂದೆ ಇವೆ ಎಂದರು.
ಕರ್ನಾಟಕ ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ ಡಿ. ದೇವರಾಜ ಅರಸು. ದಮನಿತರ ಅಭಿವೃದ್ಧಿಗೆ ಶ್ರಮಿಸಿದ ಶ್ರೀಮಂತ ವ್ಯಕ್ತಿತ್ವ ಅರಸು ಅವರದ್ದು. ರಾಜ್ಯದಲ್ಲಿ ಒಂದಿಂಚು ನೆತ್ತರು ಹರಿಸದೇ ಉಳುವವನನ್ನೇ ಭೂಮಿಯ ಒಡೆಯ ನ್ನಾಗಿ ಮಾಡಿದ ಧೀಮಂತ ನಾಯಕ ಅರಸು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿರುವ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಸಮಾಜದಲ್ಲಿ ಸಮಾನತೆಯನ್ನು ಸಾರಿದ ದೇವರಾಜ ಅರಸು, ಶೋಷಿತರಿಗೆ ಶಕ್ತಿ ತುಂಬಿ ಮೇಲೆತ್ತಿದವರು. ಅರಸು ಅವರು ಕರ್ನಾಟಕದ ರಾಜಕೀಯದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತದ ನಿಜವಾದ ಪ್ರತಿರೂಪವಾಗಿದ್ದರು ಎಂದರು.
ಉಡುಪಿ ತಾಲೂಕು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗರಾಜ್, ಡಿ. ದೇವರಾಜ ಅರಸು ವ್ಯಕ್ತಿತ್ವ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿ, 1915ರ ಆಗಸ್ಟ್ 20ರಂದು ಮೈಸೂರಿನ ಕಲ್ಲಳ್ಳಿಯಲ್ಲಿ ಜನಿಸಿದ ಡಿ. ದೇವರಾಜ ಅರಸರು ಜೀವನದುದ್ದಕ್ಕೂ ಸರಳತೆಯಿಂದಲೇ ಜೀವನ ನಡೆಸಿದ್ದರು. ಅಧಿಕಾರಕ್ಕೆ ಬಂದ 6 ತಿಂಗಳಲ್ಲೆ ಹಿಂದುಳಿದ ವರ್ಗಗಳಿಗೆ ಹೊಸ ಶಕ್ತಿ, ಚೈತನ್ಯ ತುಂಬಿದ್ದರು. ಅವರು ಜಾರಿಗೆ ತಂದಿರುವ ಸಾಮಾಜಿಕ ಸುಧಾರಣೆಗಳು ಇಂದಿಗೂ ಹಲವರ ಬಾಳಿಗೆ ಬೆಳಕಾಗಿದೆ ಎಂದರು.
ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಜಾರಿಗೆ ತಂದ ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆ ದೇಶದಲ್ಲಿಯೇ ಮಾದರಿಯಾಗಿತ್ತು. ರಾಜ್ಯದಲ್ಲಿ ಜಮೀನ್ದಾರಿ ಪದ್ಧತಿ, ಜೀತ ಪದ್ಧತಿ ಮತ್ತು ತಲೆಮೇಲೆ ಮಲ ಹೊರುವ ಅನಿಷ್ಟ ಪದ್ಧತಿಗಳ ನಿರ್ಮೂಲನೆ, ವಿದ್ಯಾರ್ಥಿಗಳಿಗೆ ಸಹಾಯಧನ, ನಿರುದ್ಯೋಗಿಗಳಿಗೆ ಸ್ಟೈಫಂಡ್, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯ ಸ್ಥಾಪನೆ, ಹಂಚಿ ಹೋಗಿದ್ದ ಕನ್ನಡ ನಾಡನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡುವುದು ಸೇರಿದಂತೆ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಅವರು ಕೈಗೊಂಡ ಕಲ್ಯಾಣಕಾರಿ ಕ್ರಮಗಳು ಇಂದಿಗೂ ಮಾದರಿಯಾಗಿವೆ ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ 2025-26 ನೇ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎಎಸ್ಪಿ ಸುಧಾಕರ್ ನಾಯಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಿಲಯದ ವಿದ್ಯಾರ್ಥಿನಿಯರಾದ ಚೈತ್ರಾ ಕೆ.ಸಿ ಹಾಗೂ ಗಾನ ಕಾರ್ಯಕ್ರಮ ನಿರೂಪಿಸಿ, ಉಡುಪಿ ತಾಲೂಕು ಕಲ್ಯಾಣ ಅಧಿಕಾರಿ ಶ್ರೀಕಾಂತ್ ವಂದಿಸಿದರು.