ಉಡುಪಿ ಆಸುಪಾಸು ಬಾಳೆಹಣ್ಣು ಮಂಡಿ ಮೇಲೆ ದಾಳಿ; ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶಪಡಿಸಿದ ಅಧಿಕಾರಿಗಳು
ಉಡುಪಿ, ಆ.20: ಕುಂದಾಪುರದ ಸಹಾಯಕ ಕಮಿಷನಲ್ ರಶ್ಮಿ ಎಸ್.ಆರ್., ಆಹಾರ ಸುರಕ್ಷತಾ ಅಧಿಕಾರಿ ವಿವೇಕ್, ಉಡುಪಿ ತಹಶೀಲ್ದಾರ್ ಗುರುರಾಜ್ ಸೇರಿದಂತೆ ಅಧಿಕಾರಿಗಳ ತಂಡವೊಂದು ಇಂದು ಬೆಳಗ್ಗೆ ಉಡುಪಿಯ ಅಲೆವೂರು, ಕೆಮ್ತೂರು ಹಾಗೂ ದುಗ್ಲಿಪದವು ಪರಿಸರದಲ್ಲಿರುವ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಿಢೀರ್ ದಾಳಿ ನಡೆಸಿ ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕವನ್ನು ಬಳಸುತ್ತಿರುವುದನ್ನು ಪತ್ತೆ ಹಚ್ಚಿ ಹಲವರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗುರುವಾರ ಮುಂಜಾನೆ ಮಣಿಪಾಲ ಬಳಿ.ಯ ದುಗ್ಲಿಪದವು ಹಾಗೂ ಕೆಮ್ತೂರಿನಲ್ಲಿ ಬಾಳೆಹಣ್ಣು ರಖಂ ವ್ಯಾಪಾರಸ್ತರು ಹಾಗೂ ದಾಸ್ತಾನುಗಾರರ ಗೋದಾಮುಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬಾಳೆಹಣ್ಣಿಗೆ ಬಳಸುತಿದ್ದ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಲಾದ ರಾಸಾಯನಿಕಗಳು, ಕೃತಕ ಬಣ್ಣ ನೀಡುವ ರಾಸಾಯನಿಕಗಳು ಹಾಗೂ ಅದನ್ನು ಬಳಸಲು ಉಪಯೋಗಿಸುವ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ ಅಲ್ಲಿ ದಾಸ್ತಾನಿದ್ದ ಸುಮಾರು ಸಾವಿರಾರು ಕೆ.ಜಿಯಷ್ಟು ರಾಸಾಯನಿಕ ಬಳಸಿದ ಬಾಳೆಹಣ್ಣುಗಳನ್ನು ಜಪ್ತಿ ಮಾಡಿದ ತಂಡ ಅವುಗಳನ್ನು ನಾಶಪಡಿಸಿತು. ಜೊತೆಗೆ ಅಲ್ಲಿದ್ದ ವಿವಿಧ ಅಪಾಯಕಾರಿ ರಾಸಾಯನಿಕಗಳು, ಕೃತಕ ಬಣ್ಣದ ರಾಸಾಯನಿಕಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
ಜೊತೆಗೆ ಬಾಳೆಹಣ್ಣು ಸಾಗಾಟಕ್ಕೆ ಬಳಸುತಿದ್ದ ಗೂಡ್ಸ್ ಟೆಂಪೊಗಳನ್ನು ಸಹ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.