ಅರಸು ಸಾಮಾಜಿಕ ನ್ಯಾಯದ ಹರಿಕಾರ: ಎಸಿ ರಶ್ಮಿ ಎಸ್.ಆರ್.
ಕುಂದಾಪುರ, ಆ.20: ಡಿ.ದೇವರಾಜು ಅರಸು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ರಾಜ್ಯದ ಸಹಸ್ರಾರು ಮಂದಿ ಹಿಂದುಳಿದ ವರ್ಗದ ಮಕ್ಕಳಿಗೆ ಸರಕಾರದಿಂದ ಹಾಸ್ಟೆಲ್ ಆರಂಭಿಸಿದವರು. ದೇಶದ ಭವಿಷ್ಯ ಆಗಿರುವ ಇಂದಿನ ಮಕ್ಕಳೆಲ್ಲ ಅವರ ಜೀವನ ಚರಿತ್ರೆಯನ್ನು ಓದಬೇಕು. ಆ ಮೂಲಕ ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಹೇಳಿದ್ದಾರೆ.
ಗುರುವಾರ ಇಲ್ಲಿನ ಶ್ರೀನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ನಡೆದ ಕುಂದಾಪುರ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕುಂದಾಪುರ ತಾಲೂಕು ಸಂಯುಕ್ತ ಆಶ್ರಯದಲ್ಲಿ ನಡೆದ ಹಿಂದುಳಿದ ಸಮುದಾಯಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದರು.
ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ ದರು. ಬಿದ್ಕಲ್ ಕಟ್ಟೆ ಸರಕಾರಿ ಪ.ಪೂ. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಕಿಣಿ, ದೇವರಾಜ ಅರಸು ಅವರ ಬದುಕು - ಸಾಧನೆ - ಚಿಂತನೆ ಕುರಿತಾಗಿ ಉಪನ್ಯಾಸ ನೀಡಿದರು.
ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಸುಧಾಕರ ಶೆಟ್ಟಿ, ನಗರ ಠಾಣೆಯ ಎಎಸ್‌ಐ ಧರ್ಮೇಂದ್ರ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ. ಪ್ರಭಾಕರ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಕುಲಾಲ್, ನಿಲಯಗಳ ಮೇಲ್ವಿಚಾರಕರು, ಸಿಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ಕುಂದಾಪುರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆಶಾದೇವಿ ನಾಯಕ್ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿ ಸಿದರು. ಬೈಂದೂರು ಹಾಸ್ಟೆಲ್‌ನ ಮೇಲ್ವಿಚಾರಕ ಶಂಕರಗೌಡ ಕಾರ್ಯಕ್ರಮ ನಿರೂಪಿಸಿದರು.