ಪ್ರತಿಭೆಗೆ ತಕ್ಕಂತೆ ತರಬೇತಿ ನೀಡಿದರೆ ಸಾಧನೆ ಸಾಧ್ಯ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಹಿರಿಯ ಪ್ರತಿಭೆಗಳ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟನೆ

Update: 2026-08-22 20:49 IST

ಶಿರ್ವ : ನಾವು ಮಕ್ಕಳಿಗೆ ತರಬೇತಿ ಕೊಡುವಲ್ಲಿ ಸೋತಿದ್ದೇವೆ. ಪ್ರತೀ ಮಗುವಿನಲ್ಲಿಯೂ ಸುಪ್ತ ಪ್ರತಿಭೆಗಳಿವೆ. ನಮ್ಮ ನಾಡು ಪ್ರತಿಭಾ ಸಂಪನ್ನತೆಯಿಂದ ಕೂಡಿದೆ. ನಾವು ಸಾಂಸ್ಕೃತಿಕ ಪರಂಪರೆಯ ವಾರೀಸುದಾರರು. ಮಕ್ಕಳಿಗೆ ಬಾಲ್ಯದಿಂದಲೇ ಪ್ರತಿಭೆಗೆ ತಕ್ಕಂತೆ ತರಬೇತಿ ನೀಡಿದರೆ ಉತ್ತಮ ಸಾಧಕರಾಗಲು ಸಾಧ್ಯ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಶನಿವಾರ ಶಿರ್ವ ಹಿಂದೂ ಪ್ರೌಢ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ 2026-27ನೇ ಸಾಲಿನ ಹಿರಿಯ ಪ್ರತಿಭೆಗಳ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಿದ್ಯೆಯ ಜೊತೆಗೆ ವ್ಯಕ್ತಿತ್ವದ ನಿರ್ಮಾಣ ಕಾರ್ಯ ಆಗಬೇಕು. ಅಭಜಿತ ಕರಾವಳಿ ಜಿಲ್ಲೆಗಳು ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಜೊತೆಗೆ ಮಾದಕ ದ್ರವ್ಯ ವ್ಯಸನದಲ್ಲೂ ಮೂರನೇ ಸ್ಥಾನದಲ್ಲಿ ಇದೆ ಎನ್ನುವುದು ವಿಷಾದನೀಯ. ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯ ಕನ್ನಡ ಸಂಸ್ಕೃತಿ ಇಲಾಖೆುಂದ ನಿರಂತರವಾಗಿ ನಡೆಯುತ್ತದೆ. ಈ ಕ್ಷೇತ್ರದಲ್ಲಿ ಕರಾವಳಿಯ ಕಲಾವಿದರೂ ಮಿಂಚಿದ್ದಾರೆ. ಇಂದು ಸಮಾಜದಲ್ಲಿ ಅಮಲು ಪದಾರ್ಥ, ಮಾದಕ ದ್ರವ್ಯ ಸೇವಿಸುವ ಯುವಜನತೆಯ ಸಂಖ್ಯೆ ಹೆಚ್ಚುತ್ತಿದೆ. ಭಯಮುಕ್ತ ಸಮಾಜ ನಿರ್ಮಾಣ ವಾಗಬೇಕಾದರೆ ಡ್ರಗ್ಸ್ ಮುಕ್ತ ವಾತಾವರಣ ನಿರ್ಮಾಣ ಆಗಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ವಿದ್ಯಾವರ್ಧಕ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು. ಅಧ್ಯಕ್ಷತೆಯನ್ನು ವಿದ್ಯಾರ್ವಧಕ ಸಂಘದ ಅಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ್ ಶೆಟ್ಟಿ ವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಹಿಂದೂ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ವಸಂತಿ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಸುಜಾತಾ ಮೇಡಮ್ ಉಪಸ್ಥಿತರಿದ್ದರು. ತೇಜಸ್ ಬಂಗೇರಾ ಕಾರ್ಯಕ್ರಮ ನಿರೂಪಿಸಿದರು. ರಾಮಾಂಜಿ ಉಡುಪಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

9 ಕಲಾ ತಂಡಗಳ 85 ಕಲಾವಿದರು!

ಜಿಲ್ಲೆಯ ಆಯ್ದ 9 ಕಲಾ ತಂಡಗಳ 85 ಕಲಾವಿದರು ಸಾಂಸ್ಕೃತಿ ಸೌರಭ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉದ್ಯಾವರ ಪುನೀತ್ ರಾಜ್ ತಂಡದ ಕಂಗೀಲು ನೃತ್ಯ, ಭಾಗ್ಯಲಕ್ಷ್ಮೀ ಉಪ್ಪೂರು ಬಳಗದ ಹರಿಕಥೆ, ರಾಧಾಕೃಷ್ಣ ನೃತ್ಯಾನಿಕೇತನ ತಂಡದ ಭರತನಾಟ್ಯ, ಖ್ಯಾತ ಗಾಯಕ ಪ್ರಕಾಶ್ ಸುವರ್ಣ ಬಳಗದ ಸುಗಮ ಸಂಗೀತ, ವಿದ್ವಾನ್ ಕೆ.ಬಾಲಚಂದ್ರ ಭಾಗವತ್ ಉಡುಪಿ ಇವರ ವಾದ್ಯ ಸಂಗೀತ, ವೀಣಾ ಸಾಮಗ ಬಳಗದ ಸಮೂಹ ನೃತ್ಯ, ಬೆಳ್ಮಣ್ ರಕ್ಷಿತ್ ಮತ್ತು ತಂಡದ ಹಾಲಕ್ಕಿ ಸುಗ್ಗಿ ಕುಣಿತ, ಬನ್ನಂಜೆ ವಾಸುದೇವ ಮತ್ತು ಬಳಗದ ಚಂಡೆ ವಾದನ, ಕೋಟ ನರಸಿಂಹ ತುಂಗ ನಿರ್ದೇಶನದ ಶೂರ್ಪನಖಿ ಮಾನಭಂಗ, ಯಕ್ಷಗಾನ ಬಯಲಾಟ ಆಕರ್ಷಕವಾಗಿ ಮೂಡಿಬಂದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News