ಪರೀಕ ಸೌಖ್ಯವನ ಆಸ್ಪತ್ರೆಗೆ ಎನ್‌ಎಬಿಎಚ್ ಮಾನ್ಯತೆ

Update: 2026-08-22 21:09 IST

ಉಡುಪಿ: 20ವರ್ಷಗಳ ಹಿಂದೆ ಪರ್ಕಳ ಸಮೀಪದ ಪರೀಕದಲ್ಲಿ ಪ್ರಾರಂಭಗೊಂಡ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಇದೀಗ ಆಸ್ಪತ್ರೆಗಳ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ (ಎನ್‌ಎಬಿಎಚ್) ಅಧಿಕೃತ ಮಾನ್ಯತೆಯ ಪ್ರಮಾಣಪತ್ರ ದೊರೆತಿದೆ ಎಂದು ಪರೀಕ ಸೌಖ್ಯವನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ ಹೇಳಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಡಾ.ಪೂಜಾರಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪರೀಕ ಸೌಖ್ಯವನ ಆಸ್ಪತ್ರೆಯ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಈ ಪ್ರಮಾಣಪತ್ರ ಲಭಿಸಿದೆ ಎಂದರು.

2007ರಲ್ಲಿ 60 ಹಾಸಿಗೆಗಳೊಂದಿಗೆ ಪ್ರಾರಂಭಗೊಂಡ ಈ ಆಸ್ಪತ್ರೆ ಈಗ 320 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಯಾಗಿ ಬೆಳೆದುನಿಂತಿದೆ. ಇಲ್ಲಿ ದಾಖಲಾಗುವ ಸಾದಕರಿಗೆ ಸೂಕ್ತ ಸೌಲಭ್ಯ ಒದಗಿಸಲು ಆಸ್ಪತ್ರೆಗೆ ರಾಷ್ಟ್ರೀಯ ಮಾನ್ಯತೆ ಪಡೆಯುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ 2023ರ ಆಗಸ್ಟ್ ತಿಂಗಳಿನಿಂದ ಸಿದ್ಧತೆಗಳು ಪ್ರಾರಂಭಗೊಂಡಿದ್ದವು ಎಂದವರು ವಿವರಿಸಿದರು.

ಎನ್‌ಎಬಿಎಚ್ ವಾರ್ಗದರ್ಶಿ ಸೂತ್ರದ ಪ್ರಕಾರ ಮಾನ್ಯತೆಗೆ ಅಗತ್ಯವಿರುವಂತೆ ಎಲ್ಲಾ ವಿಭಾಗಗಳ ಸೌಲಭ್ಯ, ಸೌಕರ್ಯಗಳನ್ನು ಪರಿಷ್ಕರಿಸಿ ಮಾರ್ಪಾಡುಗೊಳಿಸಸಲಾಯಿತು. ಚಿಕಿತ್ಸಾ ವಿಭಾಗ, ಸ್ವಚ್ಛತಾ ವಿಭಾಗ, ಪಥ್ಯಾಹಾರ ವಿಭಾಗ, ವೈದ್ಯಕೀಯ ವಿಭಾಗ ಇತ್ಯಾದಿಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಲಾಯಿತು. ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಟಿಫಿಕೇಟ್, ತುರ್ತು ಅಗ್ನಿಶಾಮಕ ನಿರ್ವಹಣಾ ವ್ಯವಸ್ಥೆಯನ್ನು ಮಾಡಿ ಕೊಳ್ಳಲಾಯಿತು ಎಂದರು.

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಎನ್‌ಎಬಿಎಚ್ ತಂಡವೊಂದು ಸೌಖ್ಯವನಕ್ಕೆ ಭೇಟಿ ನೀಡಿ ಪ್ರತಿಯೊಂದು ವಿಭಾಗಗಳ ಕೂಲಂಕಷ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದು, ಇದನ್ನು ಆಧಾರದಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿ ಆಸ್ಪತ್ರೆಗೆ ಎನ್‌ಎಬಿಎಚ್ ಸರ್ಟಿಫಿಕೇಟ್ ನೀಡಿದೆ ಎಂದು ಡಾ.ಗೋಪಾಲ ಪೂಜಾರಿ ತಿಳಿಸಿದರು.

ನಾಲ್ಕು ವರ್ಷಗಳ ಅವಧಿಗೆ ದೊರಕಿರುವ ಈ ಮಾನ್ಯತಾ ಪತ್ರದಿಂದ ಸಂಸ್ಥೆಯಲ್ಲಿ ಸಾಧಕರ ದಾಖಲಾತಿ ಹೆಚ್ಚುವ ವಿಶ್ವಾಸವಿದೆ. ಮಾನ್ಯತಾ ಪತ್ರದಿಂದ ಸಂಸ್ಥೆಯಲ್ಲಿ ಉತ್ತಮ ಗುಣಮಟ್ಟದ ಸೇವೆ ಸಾಧಕರಿಗೆ ಸಿಗುತ್ತದೆ ಎಂದು ಪರೀಕ ಸೌಖ್ಯವನದ ವ್ಯವಸ್ಥಾಪಕ ಪ್ರವೀಣಕುಮಾರ್ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸೌಖ್ಯವನದ ಸ್ಥಾನಿಕ ವೈದ್ಯಾಧಿಕಾರಿ ಡಾ.ಶೋಭಿತ್ ಶೆಟ್ಟಿ, ಮಹಿಳಾ ವೈದ್ಯಾಧಿಕಾರಿ ಡಾ.ಪೂಜಾ ಜಿ., ಫಿಸಿಯೋಥೆರಪಿಸ್ಟ್ ಡಾ.ಚೇತನಾ ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News