ರಾಸಾಯನಿಕಯುಕ್ತ ಬಾಳೆಹಣ್ಣು ಗೋದಾಮಿಗೆ ದಾಳಿ ಪ್ರರಕರಣ: ಮೂರು ಪ್ರಕರಣ ದಾಖಲು; 10,890 ಕೆಜಿ ಬಾಳೆಹಣ್ಣು ವಶ

Update: 2026-08-22 21:00 IST

ಉಡುಪಿ, ಆ.22: ಕುಂದಾಪುರ ಉಪವಿಭಾಗೀಯ ಅಧಿಕಾರಿ ರಶ್ಮಿ ಮಾರ್ಗದರ್ಶನದಲ್ಲಿ ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ತ್ರಿಮಲ್ಲೆ ನೇತೃತ್ವದಲ್ಲಿ ಆ.20ರಂದು ರಾಸಾಯನಿಕ ಪದಾರ್ಥ ಬಳಸಿ ಬಾಳೆ ಕಾಯಿಗಳನ್ನು ಹಣ್ಣು ಮಾಡುತ್ತಿರುವ ಗೋದಾಮಿಗೆ ದಾಳಿ ನಡೆಸಿರುವ ಬಗ್ಗೆ ಇದೀಗ ಮಣಿಪಾಲ ಮತ್ತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಒಟ್ಟು 8,87200ರೂ. ಮೌಲ್ಯದ 10,890 ಕೆಜಿ ತೂಕದ ಬಾಳೆಹಣ್ಣು ಮತ್ತು ಎಂಟು ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆ.20ರಂದು ಪಡುಅಲೆವೂರು ಮಂಚಿಕೆರೆ ಇಳಿಜಾರು ಬಳಿ ನಾಗರಾಜ ಎಂಬಾತ ಗೋದಾಮಿಗೆ ದಾಳಿ ನಡೆಸಿ, ರಾಸಾಯನಿಕ ಬಳಸಿದ 3,27,200 ರೂ. ಮೌಲ್ಯದ 4090 ಕೆಜಿ ಕಾಯಿ ಬಾಳೆಗೊನೆಗಳನ್ನು ಮತ್ತು ಮೂರು ಗೂಡ್ಸ್ ಟೆಂಪೋ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಮ್ತೂರು ವಿಷ್ಣಮೂರ್ತಿ ದೇವಸ್ಥಾನದ ಹತ್ತಿರದ ತಿಮ್ಮರೆಡ್ಡಿ ಎಂಬಾತನ ಗೋದಾಮಿಗೆ ದಾಳಿ ನಡೆಸಿ ರಾಸಾಯನಿಕ ಬಳಸಿದ 1,60,000ರೂ. ಮೌಲ್ಯದ 2000 ಕೆ.ಜಿ. ಬಾಳೆಗೊನೆಗಳನ್ನು ಮತ್ತು ಮೂರು ಗೂಡ್ಸ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೆಮ್ತೂರು ಶಾಲೆಯ ಬಳಿಯ ಕಿರಣ್ ಕುಮಾರ್ ಎಂಬಾತ ಗೋದಾಮಿಗೆ ದಾಳಿ ನಡೆಸಿ, ರಾಸಾಯನಿಕ ಪದಾರ್ಥ ಬಳಸಿದ 3,84,000ರೂ. ಮೌಲ್ಯದ 4800 ಕೆಜಿ ಬಾಳೆಕಾಯಿಗಳನ್ನು ಮತ್ತು ಎರಡು ಗೂಡ್ಸ್ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News