ಉಡುಪಿ ಜಿಲ್ಲಾಸ್ಪತ್ರೆ ಆರಂಭಕ್ಕೆ ಮುಂದುವರೆದ ಧರಣಿ; ಸರಕಾರಕ್ಕೆ ದೇಣಿಗೆ ಸಂಗ್ರಹಿಸುವ ಮೂಲಕ ವಿನೂತನ ಪ್ರತಿಭಟನೆ
ಉಡುಪಿ, ಅ.3: ಉಡುಪಿಯ ನೂತನ ಜಿಲ್ಲಾಸ್ಪತ್ರೆಯನ್ನು ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ಹೋರಾಟದ ಮೂರನೇ ದಿನವೂ ಮುಂದುವರೆದಿದ್ದು, ಶನಿವಾರ ವೇದಿಕೆ ಪದಾಧಿಕಾರಿ ಗಳು ಹಾಗೂ ಸದಸ್ಯರು ಸರಕಾರಕ್ಕಾಗಿ ದೇಣಿಗೆಯನ್ನು ಸಂಗ್ರಹಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಸರಕಾರಕ್ಕೆ ಆಸ್ಪತ್ರೆ ಆರಂಭಿಸಲು ಹಣದ ಕೊರತೆಯಾಗಿದ್ದರೆ ಪದಾಧಿಕಾರಿ ಗಳು ಹಾಗೂ ಕಾರ್ಯಕರ್ತರಿಂದ ಸಂಗ್ರಹಿಸಿದ ಹಣವನ್ನು ನೀಡಲು ಸಿದ್ಧ ಎಂದು ಧರಣಿನಿರತರು ತಿಳಿಸಿದರು. ಧರಣಿನಿರತರು ರಾಜ್ಯ ಸರಕಾರದ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅ.4ರಂದು ಬೆಳಿಗ್ಗೆ 10 ಗಂಟೆಯಿಂದ ಸತತ 80 ಗಂಟೆಗಳ ಕಾಲ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಂವಿಧಾನವನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ. ಈ ಸಮಯದಲ್ಲಿ ಸಂಘಟನೆಯ ಪದಾಧಿಕಾರಿಗಳಿಗೆ ಉಪವಾಸ ಸತ್ಯಾಗ್ರಹ ನಿರತರಾಗಿರುವ ಆರೋಗ್ಯದಲ್ಲಿ ಸಮಸ್ಯೆ ಉಂಟಾದಲ್ಲಿ ಅದಕ್ಕೆ ಜಿಲ್ಲಾಡಳಿತ ನೇರ ಹೊಣೆಯಾಗಿರುತ್ತದೆ ಎಂದು ಕರವೇ ಗೌರವಾಧ್ಯಕ್ಷ ಅನ್ಸಾರ್ ಅಹ್ಮದ್ ತಿಳಿಸಿದರು.
ಜಿಲ್ಲಾಡಳಿತ ತನ್ನ ಅಹಂಕಾರ ಮನೋಭಾವನೆಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಸ್ಪಷ್ಟವಾದ ಮಾಹಿತಿ ಯನ್ನು ನೀಡುತ್ತಿಲ್ಲ. ಜಿಲ್ಲಾಡಳಿತ ಇದೇ ರೀತಿಯ ವರ್ತನೆಯನ್ನು ಮುಂದುವರೆಸಿದರೆ ಹೋರಾಟವನ್ನು ತೀವ್ರಗೊಳಿ ಸುವುದು ಅನಿವಾರ್ಯ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಸುಧೀರ್ ಪೂಜಾರಿ, ಮಹಿಳಾ ಜಿಲ್ಲಾಧ್ಯಕ್ಷೆ ದೇವಕಿ ಬಾರ್ಕೂರು, ಜಿಲ್ಲಾ ಸಂಚಾಲಕ ಎಂ.ಎಸ್.ಸೈಯ್ಯದ್ ನಿಝಾಮುದ್ದೀನ್, ಉಪಾಧ್ಯಕ್ಷ ಅಲ್ಫೋನ್ಸೋ ಮೆನೇಜಸ್ ಮೊದಲಾದವರು ಉಪಸ್ಥಿತರಿದ್ದರು.