ಹಿರಿಯಡ್ಕ: ಗಾಂಧಿ ನೆನಪಲ್ಲಿ ಸಾಮರಸ್ಯ ನಡಿಗೆ
ಹಿರಿಯಡ್ಕ, ಅ.3: ಈ ನೆಲದ ಆತ್ಮವಾಗಿ ಭಾರತವನ್ನು ಮುನ್ನಡೆಸಿ ಜಗತ್ತನ್ನು ಎಚ್ಚರಿಸುವ ಬೆಳಕಾಗಿ ಬೆಳಗುತ್ತಿರುವ ಅಹಿಂಸೆ ಮತ್ತು ಸತ್ಯಾಗ್ರಹದ ಗಾಂಧಿ ಭಾರತದ ಹೆಮ್ಮೆಯ ಪದಕ ಎಂದು ಲಯನ್ಸ್ ಕ್ಯಾಬಿನೆಟ್ ಸದಸ್ಯ ಬಿ.ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್‌ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದಲ್ಲಿ ಶುಕ್ರವಾರ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿಯ ಭಾಗವಾದ ಸಾಮರಸ್ಯ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ ಶೆಟ್ಟಿ ಎಚ್. ಮಾತನಾಡಿ, ಸಾಮರಸ್ಯದ ಬದ್ದತೆಯೊಂದಿಗೆ ಸತ್ಯಾಗ್ರಹದ ಸಾತ್ವಿಕ ಸಾಮರ್ಥ್ಯವನ್ನು ಕಳೆದುಕೊಳ್ಳದೆ ಈ ದೇಶದ ಪ್ರಜಾಸತ್ತೆಯ ಉಳಿವಿಗೆ ಗಾಂಧಿಯೇ ತೋರುಬೆಳಕು. ಮಾತ್ರವಲ್ಲ ಅವರು ಕೇವಲ ವ್ಯಕ್ತಿಯಾಗದೆ ವಿದ್ಯಾಮಾನವಾಗಿ ರೂಪುಗೊಂಡ ಗಾಂಧಿತನದ ಒಳಗೆ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಅವರ ಇನ್ನಿತರ ಅನುಯಾಯಿಗಳು ಮಿಳಿತವಾಗುವುದ ರಿಂದ ಭಾರತದ ನಿಜ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಎದುರಾಳಿತನವನ್ನು ಕಲಿಸುವ ಅವಕಾಶವೇ ಇಲ್ಲ ಎಂದರು.
ಕಾರ್ಯಕ್ರದಲ್ಲಿ ಲಯನ್ ಬಾಲಕೃಷ್ಣ ಹೆಗ್ಡೆ, ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ಉಡುಪಿ, ರೆಡ್‌ಕ್ರಾಸ್ ಸಂಚಾಲಕ ಡಾ.ರಾಧಾಕೃಷ್ಣ ನಾಯಕ್, ರೋವರ್ಸ್ ಹಾಗೂ ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ. ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ನಂದೀಶ್ ಕುಮಾರ್ ಕೆ.ಸಿ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.