ಉಡುಪಿ, ಅ.3: ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ನಲ್ಲಿ ಸಂಭವಿಸಿದ ಸ್ಪೋಟದಲ್ಲಿ ಮೃತ ಪಟ್ಟ ಮುಲ್ಕಿ ಹಳೆಯಂಗಡಿ ನಿವಾಸಿ ಯುವಕ ಮನೀಶ್ ಕರ್ಕಡ ಅವರ ಮನೆಗೆ ಹಾಗೂ ಸ್ಪೋಟದಲ್ಲಿ ಹಾನಿಗೊಳ ಗಾದ ಕಳವಾರು ಸಂತ ಜೋಸೇಫರ ಚರ್ಚಿಗೆ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ನೇತೃತ್ವದ ನಿಯೋಗ ಭೇಟಿ ನೀಡಿತು.

ಮೃತಪಟ್ಟ ಯುವಕ ಮನೀಶ್ ಕರ್ಕಡ ಹೆತ್ತವರಿಗೆ ನಿಯೋಗ ಸಾಂತ್ವಾನ ಹೇಳಿದ್ದು, ಬಳಿಕ ಕಳವಾರು ಸಂತ ಜೋಸೇಫರ ಚರ್ಚಿಗೆ ಭೇಟಿ ನೀಡಿ ಚರ್ಚಿನ ಧರ್ಮಗುರು ವಂ.ಮೈಕಲ್ ಅವರೊಂದಿಗೆ ಘಟನೆಯಲ್ಲಿ ಚರ್ಚಿಗೆ ಆಗಿರುವ ನಷ್ಟದ ಕುರಿತು ಮಾಹಿತಿ ಪಡೆದುಕೊಂಡಿತು.

ಈ ವೇಳೆ ಮಾತನಾಡಿದ ಪ್ರಶಾಂತ್ ಜತ್ತನ್ನ, ಸ್ಪೋಟದಲ್ಲಿ ಕಳವಾರು ಸಂತ ಜೋಸೇಫರ ಚರ್ಚ್ ಸೇರಿದಂತೆ ಮೂರು ಗ್ರಾಮಗಳ 54 ಮನೆಗಳು ಮತ್ತು 8 ಪ್ರಾರ್ಥನಾ ಕೇಂದ್ರಗಳಿಗೆ ಹಾನಿಯಾಗಿದೆ. ಚರ್ಚಿನ ಹಂಚು, ಕಿಟಕಿ ಗಾಜುಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು ಯಾವುದೇ ರೀತಿಯ ಆದಾಯವಿಲ್ಲದ ಚರ್ಚು ಮತ್ತೆ ದುರಸ್ಥಿ ಮಾಡಲು ಲಕ್ಷಾಂತರ ಹಣ ವ್ಯಯಿಸುವ ಅಗತ್ಯವಿದೆ. ಘಟನೆಯ ಬಳಿಕ ಎಂಆರ್‌ಪಿಎಲ್ ಆಡಳಿತವಾಗಲಿ ಸ್ಥಳೀಯ ಶಾಸಕರಾಗಲಿ ಜಿಲ್ಲಾಡಳಿತವಾಗಲಿ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ಕೂಡ ನಡೆಸದೆ ಇರುವುದು ಖಂಡನೀಯ ಎಂದು ತಿಳಿಸಿದರು.

ಊರಿನ ಅಭಿವೃದ್ದಿಯ ನಿಟ್ಟಿನಲ್ಲಿ ಬೃಹತ್ ಕೈಗಾರಿಕೆಗಳಿಗೆ ಅವಕಾಶ ನೀಡಿದ್ದು ಘಟಕಗಳಲ್ಲಿ ಸೂಕ್ತ ಸುರಕ್ಷಾ ವಿಧಾನ ಗಳನ್ನು ಅಳವಡಿಸಕೊಳ್ಳದಿ ರುವುದು ಕಂಪೆನಿ ಆಡಳಿತದ ಬೇಜವಾಬ್ದಾರಿಯಾಗಿದ್ದು ಭಾರೀ ಗಾತ್ರದ ಸ್ಪೋಟ ದಿಂದಾಗಿ ಚರ್ಚಿನ ಕಟ್ಟಡ ಸಂಪೂರ್ಣವಾಗಿ ಹಾನಿಯಾಗಿರುವ ಸಾಧ್ಯತೆ ಇದ್ದು ಕೂಡಲೇ ಚರ್ಚು ಸೇರಿದಂತೆ ಮೂರು ಗ್ರಾಮಗಳ 54 ಮನೆಗಳು ಮತ್ತು 8 ಪ್ರಾರ್ಥನಾ ಕೇಂದ್ರಗಳಿಗೆ ಆಗಿರುವ ಹಾನಿಯ ಕುರಿತು ಜಿಲ್ಲಾಧಿಕಾರಿ ಗಳ ಮೂಲಕ ತನಿಖೆ ನಡೆಸಿ ಎಂಆರ್ಪಿಎಲ್ ಸಂಸ್ಥೆಯಿಂದಲೇ ನಷ್ಟ ಪರಿಹಾರ ಕೊಡಿಸುವಂತೆ ಹಾಗೂ ಮೃತ ಮನಿಶ್ ಕರ್ಕಡ ಅವರ ಮನೆಯವರಿಗೆ ಕೂಡ ಸೂಕ್ತ ಪರಿಹಾರ ನೀಡುವಂತೆ ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಸಿಎಸ್‌ಐ ಅಮನ ಮೇಮೊರೀಯಲ್ ಚರ್ಚಿನ ಸಭಾಪಾಲಕ ವಂ.ಅಮೃತ್ ರಾಜ್ ಕೊಡೆ, ಸಿಎಸ್‌ಐ ಸದರ್ನ್ ಡಯಾಸಿಸ್ ಇದರ ಕಾರ್ಯಕಾರಿ ಸಮಿತಿ ಸದಸ್ಯ ರಾಹುಲ್ ಕರ್ಕಡ, ಯೂತ್ ಫೆಲೋಶಿಪ್ ಕಾರ್ಯದರ್ಶಿ ಸುವೀನ್ ಪಾಲನ್, ಭಾರತೀಯ ಕ್ರೈಸ್ತ ಒಕ್ಕೂಟದ ಗ್ಲಾಡ್ಸನ್ ಕರ್ಕಡ ಹಾಗೂ ಪೀರ್ಟ ದಾಂತಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor