ಉಡುಪಿ 2, ದ.ಕ. 3, ಉ.ಕ.ದ 4 ತಾಲೂಕಗಳು ಬರ ಪೀಡಿತ ಘೋಷಣೆ
ಬ್ರಹ್ಮಾವರದ ಬಳಿಕ ಉಡುಪಿ, ಬೈಂದೂರು ತಾಲೂಕು ಸೇರ್ಪಡೆ
ಉಡುಪಿ, ಅ.3: ರಾಜ್ಯ ಸರಕಾರ ಅ.1ರಂದು ಹೊಸದಾಗಿ ಘೋಷಿಸಿದ ರಾಜ್ಯದ 40 ಬರಪೀಡಿತ ತಾಲೂಕುಗಳಲ್ಲಿ ಕರಾವಳಿಯ ಉತ್ತರ ಕನ್ನಡದ ನಾಲ್ಕು, ದಕ್ಷಿಣ ಕನ್ನಡದ ಮೂರು ಹಾಗೂ ಉಡುಪಿ ಜಿಲ್ಲೆಯ ಎರಡು ತಾಲೂಕುಗಳು ಸ್ಥಾನ ಪಡೆದಿವೆ. ಈ ಮೂಲಕ ರಾಜ್ಯದ ಒಟ್ಟು 217 ತಾಲೂಕುಗಳನ್ನು ಈ ಬಾರಿ ಬರಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿದಂತಾಗಿದೆ.
ರಾಜ್ಯ ಸರಕಾರ ಮೊದಲ ಪಟ್ಟಿಯಲ್ಲಿ 101 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿತ್ತು. ಬಳಿಕ ಇದಕ್ಕೆ 23 ತಾಲೂಕುಗಳನ್ನು ಸೇಪಡೆಗೊಳಿಸಲಾಯಿತು. ಬಳಿಕ ಎರಡನೇ ಪಟ್ಟಿಯಲ್ಲಿ ಇನ್ನೂ 53 ತಾಲೂಕುಗಳನ್ನು ಸೇರಿಸಿದಾಗ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿತ್ತು. ಇದೀಗ ಮೂರನೇ ಪಟ್ಟಿಯಲ್ಲಿ ಇನ್ನೂ 40 ತಾಲೂಕುಗಳನ್ನು ಸೇರ್ಪಡೆಗೊಳಿಸುವ ಮೂಲಕ ತೀವ್ರ ಮಳೆ ಕೊರತೆ ಕಾಣಿಸಿಕೊಂಡ ರಾಜ್ಯದ ತಾಲೂಕುಗಳ ಸಂಖ್ಯೆ ಇದೀಗ 217ಕ್ಕೇರಿದಂತಾಗಿದೆ.
ಮೂರನೇ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯಿಂದ ಉಡುಪಿ ಹಾಗೂ ಬೈಂದೂರು ತಾಲೂಕುಗಳು ಸ್ಥಾನ ಪಡೆದಿವೆ. ಇದಕ್ಕೆ ಮುನ್ನ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ಬ್ರಹ್ಮಾವರ ತಾಲೂಕು ಸಾಮಾನ್ಯ (ಮಾಡರೇಟ್) ಬರ ಪೀಡಿತ ತಾಲೂಕು ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
ಇದೀಗ ಮೂರನೇ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಳ್ತಂಗಡಿ, ಬಂಟ್ವಾಳ ಹಾಗೂ ಉಳ್ಳಾಲ ತಾಲೂಕು ಗಳೂ, ಉತ್ತರ ಕನ್ನಡ ಜಿಲ್ಲೆಯಿಂದ ಅಂಕೋಲ, ಭಟ್ಕಳ, ಹಳಿಯಾಳ ಹಾಗೂ ಸಿರ್ಸಿ ತಾಲೂಕುಗಳು ಬರ ಪೀಡಿತ ತಾಲೂಕು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇದಕ್ಕೆ ಮುನ್ನ ಮೊದಲ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಹಾಗೂ ಯಲ್ಲಾಪುರ ತಾಲೂಕುಗಳು ಸ್ಥಾನ ಪಡೆದಿದ್ದವು.
ಕರ್ನಾಟಕ ರಾಜ್ಯದಲ್ಲಿರುವ ಒಟ್ಟು 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನು ಇದೀಗ ಬರ ಪೀಡಿತ ಎಂದು ಘೋಷಿಸಲಾಗಿದೆ. ಕೇವಲ 23 ತಾಲೂಕುಗಳು ಈ ಪಟ್ಟಿಯಿಂದ ಹೊರಗಿವೆ. ಆದರೆ ಉಡುಪಿ ಜಿಲ್ಲೆಯನ್ನೇ ಉದಾಹರಣೆಯಾಗಿ ಹೇಳುವುದಾದರೆ ಮಳೆ ಕೊರತೆ ಆಧಾರದಲ್ಲಿ ಹೆಬ್ರಿ, ಕಾಪು ಹಾಗೂ ಕಾರ್ಕಳ ತಾಲೂಕುಗಳು ಈ ಪಟ್ಟಿಯಲ್ಲಿ ರುವ ಅರ್ಹತೆ ಪಡೆದಿವೆ. ಕೇವಲ ಕುಂದಾಪುರ ತಾಲೂಕು ಮಾತ್ರ ಇದರಿಂದ ಹೊರಗುಳಿಯಲಿದೆ.
ಜಿಲ್ಲೆಯಲ್ಲಿ ಶೇ.32 ಮಳೆ ಕೊರತೆ: ಜಿಲ್ಲೆಯ ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ಮಳೆ ಕೊರತೆ ಈ ಬಾರಿ ಕಂಡು ಬಂದಿದೆ. ಈ ಬಾರಿ ಮಳೆಗಾಲದ ನಾಲ್ಕು ತಿಂಗಳು- ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ- ಜಿಲ್ಲೆಯಲ್ಲಿ ಶೇ.32ರಷ್ಟು ಮಳೆ ಕೊರತೆ ಉಂಟಾಗಿರುವುದು ಅಂಕಿಅಂಶಗಳಿಂದ ತಿಳಿದುಬರುತ್ತದೆ. ನಾಲ್ಕು ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 4022ಮಿ.ಮೀ. ಆಗಿದ್ದರೆ, ಈ ಬಾರಿ ಬಿದ್ದಿರುವುದು 2736ಮೀ.ಮಿ. ಮಳೆ ಮಾತ್ರ.
ಸಾಂಪ್ರದಾಯಿಕವಾಗಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ಕರಾವಳಿಯಲ್ಲಿ ಈ ಬಾರಿ ಮಳೆ ಕೊರತೆ ಕಂಡುಬಂದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ಉಡುಪಿ ಜಿಲ್ಲೆಯಲ್ಲಿ 2024ರಲ್ಲಿ ವಾಡಿಕೆ ಮಳೆಗಿಂತ ಶೇ.13ರಷ್ಟು ಅಧಿಕ ಮಳೆಯಾಗಿದ್ದರೆ, 2025ರಲ್ಲಿ ಶೇ.4ರಷ್ಟು ಅಧಿಕ ಮಳೆಯಾಗಿತ್ತು. ಆದರೆ ಈ ಬಾರಿ ಎಲ್‌ನೀನೋ ಪ್ರಭಾವದಿಂದ ಶೇ.32ರಷ್ಟು ಕೊರತೆ ಕಂಡುಬಂದಿರುವುದು ಕರಾವಳಿಯ ಮಟ್ಟಿಗೆ ಆತಂಕಕ್ಕೆ ಕಾರಣವಾಗಿದೆ.
ಈ ಬಾರಿ ಮಳೆಗಾಲದ ಅತ್ಯಧಿಕ ಮಳೆ ಕೊರತೆ ಕಂಡುಬಂದಿರುವುದು ಬ್ರಹ್ಮಾವರ ತಾಲೂಕಿನಲ್ಲಿ. ಇಲ್ಲಿ ಶೇ.38ರಷ್ಟು ಕೊರತೆ (ವಾಡಿಕೆ 3527ಮಿ.ಮೀ.-ಬಿದ್ದಿರುವ ಮಳೆ 2189ಮಿ.ಮೀ.).ಉಳಿದಂತೆ ಹೆಬ್ರಿಯಲ್ಲಿ ಶೇ.35 (5268-3398), ಕಾಪುವಿನಲ್ಲಿ ಶೇ.34 (3216-2129), ಉಡುಪಿಯಲ್ಲಿ ಶೇ.33 (3367-2263), ಕಾರ್ಕಳದಲ್ಲಿ ಶೇ.31 (4117-2858), ಬೈಂದೂರಿನಲ್ಲಿ ಶೇ.29 (3941-2814) ಹಾಗೂ ಕುಂದಾಪುರದಲ್ಲಿ ಶೇ.16ರಷ್ಟು (3355-2816) ಮಳೆಗೆ ಕೊರತೆ ಕಂಡುಬಂದಿದೆ.
ಈ ವರ್ಷದ ಜನವರಿ 1ರಿಂದ ಸೆಪ್ಟಂಬರ್ 30ರವರೆಗೆ ಬಿದ್ದ ಮಳೆಯ ಅಂಕಿಅಂಶ ಕಂಡರೆ, ಅಲ್ಲೂ ಜಿಲ್ಲೆಯಲ್ಲಿ ಶೇ.31ರಷ್ಟು ಮಳೆ ಕೊರತೆಯಾಗಿದೆ. ಈ 9 ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 4223ಮಿ.ಮೀ. ವಾಡಿಕೆ ಮಳೆಯಾ ಗಬೇಕಿದ್ದರೆ ಈ ಬಾರಿ ಬಂದಿರುವುದು 2905ಮಿ.ಮೀ. ಮಾತ್ರ. ಈ ಅವಧಿ ಯಲ್ಲಿ ಬ್ರಹ್ಮಾವರದಲ್ಲಿ ಅತ್ಯಧಿಕ ಶೇ.38 ಮಳೆ ಕೊರತೆ ಕಂಡುಬಂದಿದೆ. ಉಳಿದಂತೆ ಹೆಬ್ರಿಯಲ್ಲಿ ಶೇ.35, ಉಡುಪಿ ಮತ್ತು ಕಾಪುವಿನಲ್ಲಿ ಶೇ.32ರಷ್ಟು, ಕಾರ್ಕಳದಲ್ಲಿ ಶೇ.29, ಬೈಂದೂರಿನಲ್ಲಿ ಶೇ.28 ಹಾಗೂ ಕುಂದಾಪುರದಲ್ಲಿ ಶೇ.17ರಷ್ಟು ಮಳೆಗೆ ಕೊರತೆ ಕಾಣಿಸಿಕೊಂಡಿದೆ.
ಕಳೆದ ಸೆಪ್ಟಂಬರ್ ಒಂದು ತಿಂಗಳಲ್ಲಿ ಬಿದ್ದ ಮಳೆಯನ್ನು ಪರಿಗಣಿಸುವು ದಾದರೆ ಜಿಲ್ಲೆಯಲ್ಲಿ ಶೇ.59ರಷ್ಟು (405 ಮಿ.ಮೀ.-167ಮಿ.ಮೀ.) ಕೊರತೆ ಯಾಗಿದೆ. ಅವಧಿಯಲ್ಲಿ ಕಾರ್ಕಳದಲ್ಲಿ ಶೇ.70, ಉಡುಪಿ ಮತ್ತು ಕಾಪುವಿನಲ್ಲಿ ಶೇ.69ರಷ್ಟು, ಬ್ರಹ್ಮಾವರದಲ್ಲಿ ಶೇ.64, ಹೆಬ್ರಿಯಲ್ಲಿ ಶೇ.60 ಹಾಗೂ ಕುಂದಾಪುರದಲ್ಲಿ ಶೇ.40ರಷ್ಟು ಮಳೆ ಕೊರತೆಯಾಗಿದೆ.
ಮಳೆ ಕೊರತೆ ಈ ಬಾರಿ ಉಡುಪಿ ಜಿಲ್ಲೆಗೆ ಸೀಮಿತವಲ್ಲ. ಇಡೀ ರಾಜ್ಯ ಮಳೆ ಕೊರತೆಗೆ ತುತ್ತಾಗಿದೆ. ರಾಜ್ಯದಲ್ಲಿ ಮಳೆಗಾಲದ ನಾಲ್ಕು ತಿಂಗಳಲ್ಲಿ ಶೇ.35ರಷ್ಟು ಮಳೆಕೊರತೆಯಾಗಿದ್ದು, 30 ಜಿಲ್ಲೆಗಳು ಹಾಗೂ 209 ತಾಲೂಕು ಗಳು ಅತ್ಯಧಿಕ ಮಳೆ ಕೊರತೆಗೆ ತುತ್ತಾಗಿವೆ ಎಂದು ರಾಜ್ಯ ವಿಕೋಪ ನಿಯಂತ್ರಣ ಕೇಂದ್ರದ ಮಾಹಿತಿ ತಿಳಿಸಿದೆ.
ಎಲ್‌ನೀನೋ ಪ್ರಭಾವದಿಂದ ಈ ವರ್ಷ ಮಳೆಗಾಲದ ನಾಲ್ಕೂ ತಿಂಗಳಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಜೂನ್‌ನಲ್ಲಿ ಶೇ.50, ಜುಲೈ ತಿಂಗಳಲ್ಲಿ ಶೇ.27, ಆಗಸ್ಟ್‌ನಲ್ಲಿ ಶೇ.10 ಹಾಗೂ ಸೆಪ್ಟಂಬರ್‌ನಲ್ಲಿ ಶೇ.59ರಷ್ಟು ಮಳೆ ಕೊರತೆಯಾಗಿದ್ದರೆ ಅದೇ ರಾಜ್ಯದಲ್ಲಿ ಜೂನ್‌ನಲ್ಲಿ ಶೇ.42, ಜುಲೈನಲ್ಲಿ ಶೇ.29, ಆಗಸ್ಟ್‌ನಲ್ಲಿ ಶೇ.23 ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಶೇ.54ರಷ್ಟು ಕೊರತೆ ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಅಕ್ಟೋಬರ್ ತಿಂಗಳಲ್ಲಿ ಸಹ ವಾಡಿಕೆ ಮಳೆಯಲ್ಲಿ ಭಾರೀ ಕೊರತೆ ಕಾಣಿಸಿ ಕೊಳ್ಳುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಭತ್ತದ ಬೆಳೆಗಾರರು ಆತಂಕದಿಂದ ದಿನ ಕಳೆಯು ವಂತಾಗಿದೆ. ಭತ್ತದ ಬೆಳೆ ತೆನೆಗಟ್ಟುವ ಸಂದರ್ಭದಲ್ಲೇ ಮಳೆ ಕೈಕೊಟ್ಟಿರುವುದರಿಂದ ಬೆಳೆ ಗದ್ದೆಯಲ್ಲಿ ಒಣಗುತ್ತಿದೆ. ಸಾಂಪ್ರದಾಯಿಕವಾಗಿ ಅಕ್ಟೋಬರ್‌ನಲ್ಲಿ ಬರುವ ಹಿಂಗಾರು ಮಳೆಯಾದರೂ ಈ ಬಾರಿ ಸುರಿದರೆ ಬೆಳೆಗೆ ಅನುಕೂಲವಾಗಬಹುದೆಂಬ ರೈತನ ನಿರೀಕ್ಷೆ ಐಎಂಡಿ ಭವಿಷ್ಯದಿಂದ ಮತ್ತೆ ನುಚ್ಚುನೂರಾಗಿದೆ.
ಜಿಲ್ಲೆಯ ರೈತರು ಸಾಧ್ಯವಿದ್ದಷ್ಟು ಇರುವ ಜಲಮೂಲವನ್ನು (ಬಾವಿ, ಕೆರೆ ನೀರು) ಬಳಸಿಕೊಂಡುನೀರನ್ನು ಭತ್ತದ ಗದ್ದೆಗೆ ಹಾಯಿಸಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ನಡೆಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.