ಉದ್ಯಾವರ: ಮೃತ ಮೀನುಗಾರ ಕುಟುಂಬಕ್ಕೆ ಸಚಿವರಿಂದ 10 ಲಕ್ಷ ಪರಿಹಾರ ಧನ ವಿತರಣೆ
ಉಡುಪಿ, ಜು.15: ಕಳೆದ ಶುಕ್ರವಾರ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಸೈಂಟ್ ಮೇರೀಸ್ ದ್ವೀಪದ ಬಳಿ ಬೃಹತ್ ತೆರೆ ಬಡಿದು ದೋಣಿ ಮಗುಚಿ ನಡೆದ ದುರಂತದಲ್ಲಿ ಮೃತಪಟ್ಟ ಉದ್ಯಾವರ ಸಮೀಪದ ಪಿತ್ರೋಡಿಯ ಮೀನುಗಾರ ನೀಲಾಧರ ಜಿ.ತಿಂಗಳಾಯರ ಮನೆಗೆ ಇಂದು ಅಪರಾಹ್ನ ಭೇಟಿ ನೀಡಿದ ರಾಜ್ಯ ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ ಅವರು ಮೃತರ ಕುಟುಂಬಕ್ಕೆ ಸರಕಾರದ ವತಿಯಂದ 10 ಲಕ್ಷ ರೂ.ಗಳ ಪರಿಹಾರದ ಚೆಕ್‌ನ್ನು ವಿತರಿಸಿದರು.
ಮುರ್ಡೇಶ್ವರದಿಂದ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಅಪರಾಹ್ನ ಉಡುಪಿಗೆ ಆಗಮಿಸಿದ ಸಚಿವ ವೈದ್ಯ ನೇರವಾಗಿ ಪಿತ್ರೋಡಿಯಲ್ಲಿರುವ ಮೃತ ಮೀನುಗಾರರ ಪುಟ್ಟ ಮನೆಗೆ ಬಂದು ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳಿ, ದೈರ್ಯ ತುಂಬಿ ಪರಿಹಾರದ ಚೆಕ್‌ನ್ನು ವಿತರಿಸಿದರು.
ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಮೃತ ಮೀನುಗಾರರ ಕುಟುಂಬಕ್ಕೆ ಇದುವರೆಗೆ ಸಿಗುತಿದ್ದ 6 ಲಕ್ಷ ರೂ. ಪರಿಹಾರದ ಮೊತ್ತವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ವಿಶ್ವ ಮೀನುಗಾರಿಕಾ ದಿನದಂದು 10 ಲಕ್ಷ ರೂ.ಗಳಿಗೆ ಏರಿಸುವ ಘೋಷಣೆ ಮಾಡಿದ್ದಾರೆ. ಇದೀಗ ಪ್ರಥಮ ವಾಗಿ ನೀಲಾಧರ ತಿಂಗಳಾಯರ ಕುಟುಂಬಕ್ಕೆ ಈ ಮೊತ್ತದ ಚೆಕ್‌ನ್ನು ನೀಡಲಾಗಿದೆ ಎಂದರು.
ಇದರೊಂದಿಗೆ ಇದೇ ಪ್ರಥಮ ಬಾರಿಗೆ ದುರಂತದಲ್ಲಿ ಮೀನುಗಾರಿಕಾ ದೋಣಿ ಹಾಗೂ ಬಲೆ ಸೇರಿದಂತೆ ವಿವಿಧ ಮೀನುಗಾರಿಕಾ ಪರಿಕರಗಳಿಗೆ ಉಂಟಾಗುವ ನಷ್ಟವನ್ನೂ ಭರಿಸುವ ನಿರ್ಧಾರ ಮಾಡಲಾಗಿದೆ. ಅದರಂತೆ ಈ ದೋಣಿಯ ಎಂಜಿನ್ ಹಾಗೂ ಬಲೆಗಳಿಗೆ ಆಗಿರುವ ನಷ್ಟಕ್ಕೆ ಐದು ಲಕ್ಷ ರೂ.ಗಳ ಪರಿಹಾರದ ಚೆಕ್‌ನ್ನು ಮೀನುಗಾರ ಮುಖಂಡರಿಗೆ ನೀಡಲಾಗಿದೆ. ಇದರಲ್ಲಿ ಉಳಿಯುವ ಹಣವನ್ನು ತಿಂಗಳಾಯರ ಕುಟುಂಬಕ್ಕೆ ನೀಡುವಂತೆ ತಿಳಿಸಲಾಗಿದೆ ಎಂದರು.
ಕೆಲಸಮಯದಿಂದ ಅನಾರೋಗ್ಯದ ಕಾರಣದಿಂದ ಮೀನುಗಾರಿಕಾ ವೃತ್ತಿಗೆ ಹೋಗಲು ಅಸಾಧ್ಯವಾಗಿರುವ ನೀಲಾಧರರ ಪತ್ನಿ ವಸಂತಿ, ಮಕ್ಕಳಾದ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡುತ್ತಿರುವ ಪುತ್ರಿ ಲಿಶಾ ಹಾಗೂ ಪಿಯುಸಿಯಲ್ಲಿ ಓದುತ್ತಿರುವ ತ್ರಿಶಾರನ್ನು ಸಂತೈಸಿದ ಸಚಿವರು, ಮುಂದೆ ಅಗತ್ಯದ ಎಲ್ಲಾ ಸಹಾಯ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸೇರಿದಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ವಿವಿಧ ಪಕ್ಷಗಳ ನಾಯಕರು ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.