ಸೆ.9-15: ವನಸುಮ ಜೇಸಿ ಸಪ್ತಾಹ ‘ಸಾಂಸ್ಕೃತಿಕ ಹಬ್ಬ’
ಉಡುಪಿ, ಸೆ.7: ಜೇಸಿಐ ಉಡುಪಿ ಸಿಟಿ, ವನಸುಮ ಟ್ರಸ್ಟ್ ಮತ್ತು ವನಸುಮ ವೇದಿಕೆ ಸಹಯೋಗದಲ್ಲಿ ಸೆ.9ರಿಂದ 15ರ ತನಕ ಸಾಂಸ್ಕೃತಿಕ ಹಬ್ಬ ಪ್ರತಿದಿನ ಸಂಜೆ 6 ಗಂಟೆಯಿಂದ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ಸಪ್ತಾಹದ ನಿರ್ದೇಶಕ ಬಾಸುಮ ಕೊಡಗು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಪ್ತಾಹದ ಉದ್ಘಾಟನೆಯನ್ನು ಜೇಸಿಐ ಭಾರತದ ಜೇಸೀ ಸಪ್ತಾಹ ನಿರ್ದೇಶಕ ಗೌರೀಶ್ ಭಾರ್ಗವ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಜೇಸೀಐ ಉಡುಪಿ ಸಿಟಿಯ ಅಧ್ಯಕ್ಷೆ ಪಲ್ಲವಿ ಕೊಡಗು ವಹಿಸಲಿರುವರು. ಇದೇ ಸಂದರ್ಭದಲ್ಲಿ ಬಾಸುಮ ಕೊಡಗು ನಿರ್ದೇಶನ ಹಾಗೂ ಎಂಪೀರಿಯಾ ಎಂಟರ್ಟೈನ್ವೆಂಟ್ ನಿರ್ಮಾಣದ ’ಕೋವಿ ಮತ್ತು ಕೊಳಲು’ ಚಿತ್ರದ ಟೀಸರ್‌ನ್ನು ಚಿತ್ರ ನಿರ್ದೇಶಕ ಜೆಪಿ ತೂಮಿನಾಡ್ ಬಿಡುಗಡೆ ಮಾಡಲಿದ್ದಾರೆ ಎಂದರು.
ಸಾಂಸ್ಕೃತಿಕ ಹಬ್ಬದ ಮೊದಲ ದಿನ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ’ಛತ್ರಪತಿ ಶಿವಾಜಿ’ ನಾಟಕ ಪ್ರದರ್ಶನ ನಡೆಯಲಿದೆ. ಸೆ.10ರಂದು ಕುದ್ರೋಳಿ ಗಣೇಶ್ ಮ್ಯಾಜಿಕ್ ಪ್ರದರ್ಶನ, ಸೆ.11ರಂದು ಕಾಪು ರಂಗತರಂಗ ತಂಡದ ’ವಿಕ್ರಂ ವೇದ’ ನಾಟಕ, ಸೆ.12ರಂದು ಜೆಪಿ ತೂಮಿನಾಡ್ ನಿರ್ದೇಶನದ ’ಕಥೆ ಎಡ್ಡೆಂಡು’ ನಾಟಕ, ಸೆ.13 ಸಂಜೆ 4 ಗಂಟೆಯಿಂದ ’ಅನ್ನೋನ್ಯ ದಂಪತಿ ಸ್ಪರ್ಧೆ’, ಸೆ.14 ಸಾವಿತ್ರಿ ನಾಟ್ಯಶಾಲಾ ಕಲಾವಿದ ರಿಂದ ನೃತ್ಯವೈಭವ, ಸೆ.15 ಕಾಸರಗೊಡಿನ ಯಕ್ಷಪುತ್ಥಳಿ ಟ್ರಸ್ಟ್ ವತಿಯಿಂದ ’ಯಕ್ಷಗಾನ ಗೊಂಬೆಯಾಟ’ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೇಸೀ ಅಧ್ಯಕ್ಷೆ ಪಲ್ಲವಿ ಕೊಡಗು, ವನಸುಮ ವೇದಿಕೆ ಉಪಾಧ್ಯಕ್ಷ ಭಾಸ್ಕರ್ ಯುಕೆ, ಕಾವ್ಯವಾಣಿ ಕೊಡಗು ಉಪಸ್ಥಿತರಿದ್ದರು.