×
Ad

ಉಡುಪಿ: ಆ.24ರಂದು 17ನೇ ಈಶ ಗ್ರಾಮೋತ್ಸವ ಕ್ರೀಡಾ ಸ್ಪರ್ದೆ

Update: 2025-08-22 23:12 IST

ಉಡುಪಿ, ಆ.22: ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ವತಿಯಿಂದ ನಡೆಯುವ 17ನೇ ಈಶ ಗ್ರಾಮೋತ್ಸವದ ಗ್ರಾಮೀಣ ಕ್ರೀಡಾ ಸ್ಪರ್ಧೆಗಳ ಮೊದಲ ಹಂತದ ಪಂದ್ಯಗಳು ಇದೇ ಆ.24ರಂದು ಉಡುಪಿಯ ಸೈಂಟ್ ಸಿಸಿಲೀಸ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಸ್ಪರ್ಧಾ ಕೂಟದ ಸಂಚಾಲಕ ಸಭ್ಯತ್ ಶೆಟ್ಟಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮೀಣ ಪ್ರದೇಶಗಳ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆಗಳು ಇದರಲ್ಲಿ ನಡೆಯಲಿವೆ. ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ 40ಕ್ಕೂ ಅಧಿಕ ತಂಡಗಳು ಭಾಗವಹಿಸುವುದನ್ನು ಖಚಿತಪಡಿಸಿವೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ಹಂತದಲ್ಲಿ ಸ್ಪರ್ಧಿಸಿ ವಿಜಯಿ ತಂಡಗಳಿಗೆ ಪ್ರಥಮ 10,000 ರೂ., ದ್ವಿತೀಯ 7000ರೂ., ತೃತೀಯ 5000ರೂ. ಹಾಗೂ ನಾಲ್ಕನೇ ಬಹುಮಾನ 3000ರೂ. ನೀಡಲಾಗುವುದು. ಇದರಲ್ಲಿ ಅಗ್ರ ಎರಡು ತಂಡಗಳು ವಿಭಾಗೀಯ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯಲಿವೆ.

ಈ ಬಾರಿಯ ವಿಭಾಗೀಯ ಸ್ಪರ್ಧೆ ಆಗಸ್ಟ್ 31ರಂದು ಕೆರಾಡಿಯಲ್ಲಿ ನಡೆಯಲಿವೆ. ಇದರಲ್ಲಿ ರಾಜ್ಯದ 9 ಕ್ಲಸ್ಟರ್‌ಗಳ ತಲಾ 18 ವಾಲಿಬಾಲ್ ಹಾಗೂ ಥ್ರೋಬಾಲ್ ತಂಡಗಳು ಸ್ಪರ್ಧಿಸಲಿವೆ. ಇಲ್ಲಿ ಜಯ ಗಳಿಸುವ ಎರಡು ತಂಡಗಳು ಸೆ.21ರಂದು ಕೊಯಂಬತ್ತೂರಿನಲ್ಲಿ ನಡೆಯುವ ಫೈನಲ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆಯಲಿವೆ ಎಂದರು.

ವಿಭಾಗೀಯ ಮಟ್ಟದಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ 12,000, 8000, 6000 ಹಾಗೂ 4000ರೂ.ನಗದು ಬಹುಮಾನ ದೊರೆಯಲಿವೆ. ಫೈನಲ್‌ನಲ್ಲಿ ಗೆಲ್ಲುವ ತಂಡಗಳಿಗೆ ಐದು ಲಕ್ಷ ರೂ.ಮೊದಲ ಬಹುಮಾನ ದೊರೆಯಲಿದೆ ಎಂದು ಸಭ್ಯತ್ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಮಿತಾ ಭಟ್, ಹರಿಣಿ ಶೆಟ್ಟಿ ಹಾಗೂ ಸಜ್ಜನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News