×
Ad

ಉಡುಪಿಯ 25 ಶಿಕ್ಷಣ ಸಂಸ್ಥೆಗಳಲ್ಲಿ ರಂಗಶಿಕ್ಷಣ ತರಬೇತಿ: ತಲ್ಲೂರು

Update: 2025-11-01 17:43 IST

ಉಡುಪಿ, ನ.1: ಪ್ರಸ್ತುತ ಜಿಲ್ಲೆಯ 90ಕ್ಕೂ ಅಧಿಕ ಶಾಲೆಗಳಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಯಕ್ಷಶಿಕ್ಷಣ ವನ್ನು 3,000ಕ್ಕೂ ಅಧಿಕ ಮಕ್ಕಳು ಪಡೆಯುತ್ತಿದ್ದಾರೆ. ಆರಂಭದಲ್ಲಿ 12 ಶಿಕ್ಷಣ ಸಂಸ್ಥೆಗಳನ್ನು ಆರಿಸಿಕೊಂಡಿದ್ದು, ಈ ವರ್ಷ 25 ಶಿಕ್ಷಣ ಸಂಸ್ಥೆಗಳಲ್ಲಿ ರಂಗಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.

ರಂಗಭೂಮಿ ಉಡುಪಿ ವತಿಯಿಂದ ಕಲ್ಯಾಣಪುರ ಮಿಲಾಗ್ರಿಸ್ ಹೈಸ್ಕೂಲಿನಲ್ಲಿ ಆಯೋಜಿಸಲಾದ ಮಕ್ಕಳಿಗೆ ನಾಟಕ, ರಂಗ ತರಬೇತಿಯನ್ನು ಉಚಿತವಾಗಿ ನೀಡುವ ’ರಂಗ ಶಿಕ್ಷಣ’ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಂಗ ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ವ್ಯಕ್ತಿಯೊಳಗೆ ಅಡಿಗಿರುವ ಪ್ರತಿಭೆಯನ್ನು ಈ ರಂಗ ಶಿಕ್ಷಣದ ಮೂಲಕ ಹೊರ ಬರಲು ಸಾಧ್ಯವಿದೆ. ನಾಟಕ ಕೇವಲ ಮನೋರಜನೆ ಮಾತ್ರವಲ್ಲ ಅದು ವ್ಯಕ್ತಿತ್ವವನ್ನು ರೂಪಿಸುವ ವೇದಿಕೆ ಯಾಗಿದೆ. ವಿದ್ಯಾರ್ಥಿಗಳು ಈ ರಂಗ ಶಿಕ್ಷಣದ ಪ್ರಯೋಜನ ಪಡೆಯಲು ಮುಂದಾಗಬೇಕು ರಂಗ ಶಿಕ್ಷಣದಿಂದ ಮಕ್ಕಳಲ್ಲಿ ಸಭಾ ಕಂಪನ, ಮಾತುಗಾರಿಕೆ, ಅಭಿನಯ, ವಾಕ್ಚಾತುರ್ಯ ಸೇರಿದಂತೆ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲಾ ಶಿಕ್ಷಣವೂ ಇಲ್ಲಿ ದೊರೆಯುತ್ತದೆ ಎಂದರು.

ಯಕ್ಷಗಾನ ಕಲಿಕೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲದೆ ಅವರ ವ್ಯಕ್ತಿತ್ವ ವಿಕಸನಕ್ಕೂ ಕಾರಣವಾಗಿರುವುದನ್ನು ಮನಗಂಡಿದ್ದೇವೆ. ಅಲ್ಲದೆ ಭವಿಷ್ಯದಲ್ಲಿ ಯಕ್ಷ ಶಿಕ್ಷಣ ಪಡೆದ ಮಕ್ಕಳು ಉತ್ತಮ ಕಲಾವಿದರಾಗಿ ಮೂಡಿ ಬರಬಹುದು ಅಥವಾ ಒಬ್ಬ ಉತ್ತಮ ಪ್ರೇಕ್ಷಕರಾಗ ಬಲ್ಲರು. ಇದರಿಂದ ಯಕ್ಷಗಾನಕ್ಕೆ ಭವಿಷ್ಯದಲ್ಲಿ ಉತ್ತಮ ಕಲಾವಿದರು, ಪ್ರೇಕ್ಷಕರು ಇಲ್ಲ ಎಂಬ ಕೊರಗು ನಿವಾರಣೆಯಾಗಬಹುದು ಎಂದು ಅವರು ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಅನಿತಾ ಡಿಸೋಜ, ಹಿರಿಯ ರಂಗಕರ್ಮಿ ಹಾಗೂ ನಾಟಕ ನಿರ್ದೇಶಕ ಬಾಸುಮ ಕೊಡಗು, ರಂಗಭೂಮಿ ಉಪಾಧ್ಯಕ್ಷ ರಾಜಗೋಪಾಲ ಬಲ್ಲಾಳ್, ರಂಗಶಿಕ್ಷಣ ಸಹಸಂಚಾಲಕರಾದ ರವಿರಾಜ್ ನಾಯಕ್ ಮತ್ತು ಅಮಿತಾಂಜಲಿ ಕಿರಣ್, ಸಂಯೋಜಕ ಸೂರ್ಯಪ್ರಕಾಶ್, ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಹ್ಮಣ್ಯ ಶೇರಿಗಾರ್, ಸದಸ್ಯರಾದ ಮಲ್ಲಿಕಾ ಭಟ್, ಪಲ್ಲವಿ ಕೊಡಗು, ಯೋಗೀಶ್, ಅಭಿಷೇಕ್, ವೀಣಾ ಮೊದಲಾದವರು ಉಪಸ್ಥಿತರಿದ್ದರು.

ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ರಂಗಶಿಕ್ಷಣದ ಸಹ ಸಂಚಾಲಕ ರವಿರಾಜ್ ನಾಯಕ್ ಸ್ವಾಗತಿಸಿದರು. ಶಿಕ್ಷಕಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

‘ಶಿಕ್ಷಣದೊಂದಿಗೆ ಇಂತಹ ಶಿಕ್ಷಣೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೆತ್ತವರು, ಶಿಕ್ಷಕರು ಪ್ರೋತಾಹಿಸಬೇಕು. ಈ ಬಾರಿ ಸುಮಾರು 3,000 ಮಕ್ಕಳಿಗೆ ರಂಗ ಶಿಕ್ಷಣ ಕೊಡುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಪ್ರಬುದ್ಧ ರಂಗಕಲಾವಿದ ರನ್ನು ರಂಗಶಿಕ್ಷಣ ನೀಡಲು ಗುರುಗಳಾಗಿ ಆಯ್ಕೆ ಮಾಡಲಾಗಿದೆ. ಇವೆಲ್ಲಾ ವೆಚ್ಚವನ್ನು ರಂಗಭೂಮಿ ಉಡುಪಿ ಭರಿಸಲಿದೆ. ಈ ಮೂಲಕ ಉತ್ತಮ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ರಂಗಶಿಕ್ಷಣದ ಮೂಲಕ ಬುನಾದಿ ಹಾಕುವತ್ತ ರಂಗಭೂಮಿ ಹೆಜ್ಜೆ ಇಟ್ಟಿದೆ’

-ತಲ್ಲೂರು ಶಿವರಾಮ ಶೆಟ್ಟಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News