ಮಣಿಪಾಲದಲ್ಲಿ ಶಾಲಾ ಬಸ್ ಅಪಘಾತ ಪ್ರಕರಣ: ಸುಳ್ಳು ದೂರು, ಲೈಸೆನ್ಸ್ ಇಲ್ಲದೆ ಬಸ್ ಚಲಾಯಿಸಿದ ನಿರ್ವಾಹಕನ ಬಂಧನ
ಉಡುಪಿ, ಜು.4: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಡಿಕೇಟ್ ಸರ್ಕಲ್ ಇಳಿಜಾರು ಬಳಿ ಸೆಂಟ್ರಲ್ ಪಾರ್ಕ್ ಹೊಟೇಲ್ ಎದುರು ಜು.25ರಂದು ನಡೆದ ಶಾಲಾ ಬಸ್ ಅಪಘಾತಕ್ಕೆ ಹೊಸ ತಿರುವು ಕಂಡುಬಂದಿದ್ದು, ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಿ ಅಪಘಾತಕ್ಕೀಡು ಮಾಡಿದ ಬಸ್ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಟಪಾಡಿಯ ರಾಹಿಜ್ (20) ಬಂಧಿತ ಆರೋಪಿ. ಪೆರಂಪಳ್ಳಿಯ ಶಾಲೆಗೆ ಸೇರಿದ ಶಾಲಾ ಬಸ್ ಡಿವೈಡರ್ ಮೇಲೆ ಹತ್ತಿಸಿ ಅಪಘಾತಕ್ಕೀಡಾಗಿದ್ದು, ಇದರಿಂದ ಶಾಲಾ ಮಕ್ಕಳಿಗೆ ಗಾಯಗಳಾಗಿದ್ದವು. ಶಾಲಾ ಬಸ್ಸನ್ನು ತನ್ನ ತಂದೆ ರಿಜ್ವಾನ್ ಚಾಲನೆ ಮಾಡಿ ಅಪಘಾತಪಡಿಸಿರುವುದಾಗಿ ಶಾಲಾ ಬಸ್ ಕಂಡಕ್ಟರ್ ರಾಹಿಜ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಗಳನ್ನು ಪರಿಶೀಲಿಸಿದಾಗ ದೂರು ನೀಡಿದ ರಾಹಿಜ್ ಶಾಲಾ ಬಸ್ಸನ್ನು ಚಾಲನೆ ಮಾಡಿಕೊಂಡು ಬಂದು ಅಪಘಾತ ಪಡಿಸಿರುವುದು ಕಂಡು ಬಂದಿದೆ. ಮತ್ತೆ ತನಿಖೆ ಮುಂದುವರೆಸಿ ದಾಗ ಆರೋಪಿ ರಾಹಿಜ್‌ಗೆ ಅಧಿಕೃತ ಚಾಲನಾ ಪರವಾನಗೆ ಇಲ್ಲದೇ ಇರುವುದು ತಿಳಿದು ಬಂದಿದೆ.
ಅಧಿಕೃತ ವಾಹನ ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿಗೆ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟರೆ ಶಾಲಾ ಮಕ್ಕಳ ಜೀವಕ್ಕೆ ಅಪಾಯ ಉಂಟಾಗ ಬಹುದೆಂದು ತಿಳಿದರೂ ಶಾಲಾ ವಾಹನದ ಮಾಲಕರು ಆರೋಪಿತ ನಿಗೆ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟಿದ್ದು, ಮಾಲಕರು ಮತ್ತು ಸುಳ್ಳು ದೂರು ನೀಡಿದ ಆರೋಪಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಲಾಯಿತು.
ಅದರಂತೆ ಜು.3ರಂದು ಆರೋಪಿ ರಾಹಿಜ್‌ನನ್ನು ಮಣಿಪಾಲ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.