ಜು.12ರಂದು ಉಡುಪಿಯಲ್ಲಿ ‘ಉಡುಪಿ ವಿಷನ್-2035’ ಸಭೆ
ಉಡುಪಿ, ಜು.4: ಹತ್ತು ವರ್ಷಗಳ ಅವಧಿಗೆ ಉಡುಪಿಯ ಸಮಗ್ರ ಅಭಿವೃದ್ಧಿಯ ನೀಲನಕಾಶೆ ತಯಾರಿಸಲು ಪೂರ್ವ ಭಾವಿ ಸಿದ್ಧತೆಯಾಗಿ ಇದೇ ಜು.12ರಂದು ಸಂಜೆ 5:30ಕ್ಕೆ ಉಡುಪಿಯ ಹೊಟೇಲ್ ಕಿದಿಯೂರಿನ ಶೇಷಶಯನ್ ಹಾಲ್‌ನಲ್ಲಿ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು, ಗಣ್ಯರನ್ನೊಳಗೊಂಡ ‘ಉಡುಪಿ ವಿಷನ್-2035’ ಸಭೆ ಯನ್ನು ಕರೆಯಲಾಗಿದೆ ಎಂದು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ಹೇಳಿದ್ದಾರೆ.
ಉಡುಪಿಯಲ್ಲಿ ಇಂದು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದರು. ಇದೊಂದು ಸಮಾ ಲೋಚನಾ ಸಭೆಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಉಡುಪಿಯ ಅಭಿವೃದ್ಧಿ ಹೇಗಿರ ಬೇಕೆಂದು ಆಯಾ ಕ್ಷೇತ್ರಗಳ ಪರಿಣಿತರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ಸಭೆಯಲ್ಲಿ ಯೋಜನೆಗಳ ಸಾದ್ಯತೆಗಳ ಕುರಿತಂತೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಅವರು ಹೇಳಿದರು.
ಉಡುಪಿ ಚೇಂಬರ್ ಆಪ್ ಕಾಮರ್ಸ್‌ನ ಪ್ರಧಾನ ಕಾರ್ಯದರ್ಶಿ ಡಾ.ವಿಜಯೇಂದ್ರ ಮಾತನಾಡಿ, ಹಿಂದೆ ಪೊನ್ನು ರಾಜ್ ಹಾಗೂ ರೇಜು ಅವರು ಜಿಲ್ಲಾದಿಕಾರಿಗಳಾಗಿದ್ದ ಸಂದರ್ಭದಲ್ಲೂ ‘ಉಡುಪಿ ವಿಷನ್’ ಕುರಿತು ಸಭೆಗಳು ನಡೆದಿದ್ದವು. ಅಲ್ಲಿ ಕೆಲವು ನಿರ್ಣಯಗಳಾಗಿದ್ದು ಬಿಟ್ಟರೆ ಹೆಚ್ಚಿನ ಪ್ರಗತಿ ಕಂಡುಬರಲಿಲ್ಲ. ಆದರೆ ಈ ಬಾರಿ ನಿರ್ದಿಷ್ಟ ಯೋಜನೆಗಳೊಂದಿಗೆ ನಾವು ಮುಂದುವರಿಯಲಿದ್ದೇವೆ ಎಂದರು.
ಚೇಂಬರ್ ಆಫ್ ಕಾಮರ್ಸ್‌ನೊಂದಿಗೆ ಸಿವಿಲ್ ಇಂಜಿನಿಯರ್ಸ್, ಸಿಎ, ಜುವೆಲ್ಲರ್ಸ್, ಬಿಲ್ಡರ್ಸ್, ಹೊಟೇಲಿಯರ್ ಸೇರಿದಂತೆ ಹತ್ತಾರು ಸಂಘಟನೆಗಳು ಈ ಬಾರಿ ಕೈಜೋಡಿಸಲಿದ್ದು, ಆಯಾ ಕ್ಷೇತ್ರಗಳಲ್ಲಿ ನಡೆಯಬೇಕಿರುವ ಅಭಿವೃದ್ಧಿ ಕುರಿತಂತೆ ಅಭಿಪ್ರಾಯ ಮಂಡಿಸಲಿದ್ದಾರೆ. ಸಭೆಯಲ್ಲಿ ಎಲ್ಲಾಶಾಸಕರು, ಸಂಸದರು, ಎಲ್ಲಾ ಪಕ್ಷಗಳ ಧುರೀಣರು ಭಾಗವಹಿಸಲಿದ್ದಾರೆ ಎಂದು ಡಾ.ವಿಜಯೇಂದ್ರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚೇಂಬರ್ಸ್‌ನ ಉಪಾಧ್ಯಕ್ಷ ಪಿ.ನಟರಾಜ ಪ್ರಭು, ಅನಿಶ್ ಪೈ, ಸಿವಿಲ್ ಇಂಜಿನಿಯರ್ಸ್ ಸಂಘದ ಭಗವಾನದಾಸ್ ಹಾಗೂ ನಿರಂಜನ ಕುಮಾರ್ ಉಪಸ್ಥಿತರಿದ್ದರು.