×
Ad

ಉಡುಪಿ: ಅ.4ರಿಂದ ಮಾನಸಿಕ ಆರೋಗ್ಯ-ಯೋಗಕ್ಷೇಮ ಸಪ್ತಾಹ

Update: 2025-10-02 18:12 IST

ಉಡುಪಿ, ಅ.2: ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಮಾನಸಿಕ ಯೋಗ ಕ್ಷೇಮದ ಕುರಿತು ಜನತೆಯಲ್ಲಿ ಅರಿವು ಮೂಡಿಸಲು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಹಿನ್ನೆಲೆ ಯಲ್ಲಿ ಅ.4ರಿಂದ 12ರವರೆಗೆ ಉಡುಪಿಯಲ್ಲಿ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮ ಸಪ್ತಾಹವನ್ನು ಆಚರಿಸಲಾ ಗುತ್ತಿದೆ ಎಂದು ನಾಡಿನ ಖ್ಯಾತನಾಮ ಮನೋರೋಗ ತಜ್ಞ ಹಾಗೂ ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಡಾ.ಭಂಡಾರಿ ಲಯನ್ಸ್ ಜಿಲ್ಲೆ 317ಸಿ, ಲಯನ್ಸ್ ಕ್ಲಬ್ ಮಣಿಪಾಲ, ಐಎಂಎ ಉಡುಪಿ ಕರಾವಳಿ ಘಟಕ ಹಾಗೂ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಒಂದು ವಾರದ ಈ ಸಪ್ತಾಹ ನಡೆಯಲಿದೆ ಎಂದರು.

ಇತ್ತೀಚಿನ ವೈಜ್ಞಾನಿಕ ವರದಿಯಂತೆ ಪ್ರಸ್ತುತ ಒತ್ತಡದ ಜಗತ್ತಿನಲ್ಲಿ ವಿಶ್ವದ ಶೇ.25ರಷ್ಟು ಮಂದಿ ಖಿನ್ನತೆ ಹಾಗೂ ಆಂತಕದ ತೊಂದರೆಗಳಿಂದ ಬಳಲು ತಿದ್ದಾರೆ. 10-19 ವಯೋವರ್ಗದ ಯುವಜನತೆಯಲ್ಲಿ ಪ್ರತಿ 7 ಮಂದಿಯಲ್ಲಿ ಒಬ್ಬರು ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಹೊಂದಿದ್ದಾರೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರದಲ್ಲಿ ಶೇ.14 ಮಂದಿ ಮಾನಸಿಕ ಆರೋಗ್ಯ ಅಸ್ವಸ್ಥತೆಯೊಂದಿಗೆ ಬದುಕುತಿದ್ದಾರೆ ಎಂದರು.

ಭಾರತದಲ್ಲೂ ವಯಸ್ಕ ಜನಸಂಖ್ಯೆಯ ಶೇ.10ಕ್ಕಿಂತ ಅಧಿಕ ಮಂದಿ ಯಾವುದಾದರೂ ಒಂದು ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದಾರೆ. ದೇಶದಲ್ಲಿ ಖಿನ್ನತೆ ಹಾಗೂ ಆತ್ಮಹತ್ಯೆ ದರಗಳು ಕಳವಳಕರ ರೀತಿಯಲ್ಲಿ ಹೆಚ್ಚಿದೆ. ಅಲ್ಲದೇ ದೇಶದಲ್ಲಿ ಮಾನಸಿಕ ಆರೋಗ್ಯ ಕಾರ್ಯಪಡೆಯ ಸಂಖ್ಯೆಯೂ ತೀರಾ ಕಡಿಮೆ ಇದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ) ಪ್ರತಿ ಒಂದು ಲಕ್ಷ ಮಂದಿಗೆ ಮೂವರು ಮನೋವೈದ್ಯರಿರಬೇಕು ಎಂದು ಹೇಳಿದರೆ, ಭಾರತದಲ್ಲಿ ಈ ಸಂಖ್ಯೆ 0.7 ಮಾತ್ರ ಇದೆ ಎಂದು ವಿವರಿಸಿದರು.

ಈ ಹಿನ್ನೆಲೆಯಲ್ಲಿ ಜನತೆಗೆ ಅದರಲ್ಲೂ ಮುಖ್ಯವಾಗಿ ಯುವಜನತೆಗೆ ಮಾನಸಿಕ ಆರೋಗ್ಯದ ಕುರಿತು ಅರಿವು, ಜಾಗೃತಿ ಮೂಡಿಸಲು, ಭಾವನಾತ್ಮಕ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಯೋಗಕ್ಷೇಮದ ಕುರಿತು ಮಾಹಿತಿ ನೀಡಲು ಈ ಸಪ್ತಾಹವನ್ನು ವಿವಿದೆಡೆಗಳಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಸಪ್ತಾಹದ ಉದ್ಘಾಟನೆ ಅ.4ರ ಶನಿವಾರ ಬೆಳಗ್ಗೆ 10:30ಕ್ಕೆ ಹಾರಾಡಿಯ ಡಾ.ಎ.ವಿ.ಬಾಳಿಗಾ ಸಮುದಾಯ ಭವನ ದಲ್ಲಿ ನಡೆಯಲಿದೆ. ಬಳಿಕ ಅಲ್ಲಿನ ಅಭಯ ಹಾಗೂ ಬಂಧು ಡೇಕೇರ್ ಸೆಂಟರ್‌ನ ನಿವಾಸಿಗಳೊಂದಿಗೆ ಸಮಾಲೋಚನೆ ಹಾಗೂ ಸಂವಹನ ಆಟಗಳು ನಡೆಯಲಿವೆ. ಅ.5ರಂದು ರೋಟರಿ ಕ್ಲಬ್ ಶಂಕರಪುರದಲ್ಲಿ, ಅ.6ರಂದು ಮಣಿಪಾಲದ ಮಾಧವಕೃಪಾ ಶಾಲೆಯಲ್ಲಿ, ಅ.7ರಂದು ಮಣಿಪಾಲ್ ಟೆಕ್ನಾಲಜೀಸ್ (ಎಂಜಿಪಿಎಸ್) ನಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಅ.8ರಂದು ಮಣಿಪಾಲ ಮಾಧವಕೃಪ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಮಣಿಪಾಲ ಕೆಎಂಸಿಯ ಸಂವಹನ ಸಭಾಂಗಣದಲ್ಲಿ ಮಹಿಳೆಯರಲ್ಲಿ ಮಾನಸಿಕ ಆರೋಗ್ಯ ಬಗ್ಗೆ ಮನೋವೈದ್ಯ ಡಾ.ಮಾನಸರಿಂದ ಮಾಹಿತಿ, ಅ.9ರಂದು ಮಣಿಪಾಲದ ಗ್ರೀನ್ ವ್ಯಾಲಿ ಪ್ಯಾರಡೈಸ್‌ನಲ್ಲಿ ಮರೆಗುಳಿತನ ಮತ್ತು ಜೀವನಶೈಲಿ ಮಾರ್ಪಾಡು ಉಪನ್ಯಾಸ, ಅ.10ರಂದು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಕಾರ್ಯಾಗಾರ ನಡೆಯಲಿದೆ ಎಂದರು.

ಅ.11ರಂದು ಬೆಳಗ್ಗೆ 7 ಗಂಟೆಗೆ ಉಡುಪಿ ಕ್ಲಾಕ್ ಟವರ್‌ನಿಂದ ಅಜ್ಜರಕಾಡು ಭುಜಂಗ ಪಾರ್ಕ್‌ವರೆಗೆ ವಾಕಥಾನ್ ನಡೆಯಲಿದೆ. ಅ.12 ರಂದು ಮಣಿಪಾಲ ಸರಳೇಬೆಟ್ಟಿನ ಶಿವಪಾಡಿ ದೇವಸ್ಥಾನದಲ್ಲಿ ಬೆಳಗ್ಗೆ 9:30ಕ್ಕೆ ಕೊಳೆಗೇರಿ ಮಕ್ಕಳಿಗಾಗಿ ಆಪ್ತ ಸಲಹಾ ಕೇಂದ್ರ ಮತ್ತು ಮಾಸಿಕ ಮಾನಸಿಕ ಆರೋಗ್ಯ ಸಹಾಯವಾಣಿಯ ಉದ್ಘಾಟನೆ ನಡೆಯಲಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಸ್ವಪ್ನಾ ಸುರೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಐಎಂಎ ಉಡುಪಿ-ಕರಾವಳಿ ಅಧ್ಯಕ್ಷ ಡಾ.ಸುರೇಶ್ ಶೆಣೈ, ಲಯನ್ಸ್ ಕ್ಲಬ್ ಮಣಿಪಾಲದ ಅಧ್ಯಕ್ಷ ಗಣೇಶ್ ಪೈ ಉಪಸ್ಥಿತರಿದ್ದರು.

ಕೋವಿಡ್ ಬಳಿಕ ಮಾನಸಿಕ ಅಸ್ವಸ್ಥತೆ ಪ್ರಮಾಣ ಹೆಚ್ಚಳ

ಕೋವಿಡ್ ಬಳಿಕ ಮಾನಸಿಕ ಅಸ್ವಸ್ಥತೆಯಿಂದ ಬಳಲುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಸಮಾಜದ ಎಲ್ಲಾ ವಯೋವರ್ಗದ ಜನರಲ್ಲಿ ಹಾಗೂ ಮಹಿಳೆಯರಲ್ಲೂ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಶಾಲಾ-ಕಾಲೇಜುಗಳು ಮುಚ್ಚಿದ್ದರಿಂದ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠವನ್ನು ಮೊಬೈಲ್ ಮೂಲಕ ನೀಡಲು ತೊಡಗಿದ್ದರಿಂದ ಮೊಬೈಲ್ ಗೀಳು ಮಕ್ಕಳಲ್ಲಿ ಮಾನಸಿಕ ಅಸ್ವಸ್ಥತೆ ಹೆಚ್ಚಲು ಕಾರಣವಾಗಿದೆ. ಅದರ ಪರಿಣಾಮ ಮೂರು ವರ್ಷಗಳ ಬಳಿಕವೂ ಕಂಡುಬರುತ್ತಿದೆ ಎಂದು ಡಾ.ಭಂಡಾರಿ ತಿಳಿಸಿದರು.

ಇದೇ ಕಾರಣದಿಂದ ಮಹಿಳೆಯರು ಹಾಗೂ ಹಿರಿಯ ನಾಗರಿಕರಲ್ಲೂ ಮಾನಸಿಕ ರೋಗದ ಲಕ್ಷಣಗಳು ಕಂಡು ಬರುತ್ತಿದೆ. ಇದಕ್ಕೆ ಅನ್ಯ ಕಾರಣಗಳಿದ್ದರೂ, ಕೋವಿಡ್ ಅವಧಿಯಲ್ಲಿ ಮೊಬೈಲ್ ಬಳಕೆ ಎಲ್ಲರಲ್ಲೂ ಹೆಚ್ಚಿರುವುದು ಪ್ರಮುಖ ಕಾರಣ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News