ಉಡುಪಿ ಜಿಲ್ಲೆ| ಪಿಯುಸಿ ಪರೀಕ್ಷೆ ಪ್ರಾರಂಭ; ಕನ್ನಡ ಪರೀಕ್ಷೆಗೆ 40 ಮಂದಿ ಗೈರು
ಉಡುಪಿ, ಮಾ.1: ವೃತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಿರ್ಣಾಯಕವೆನಿಸಿರುವ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರದಿಂದ ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭಗೊಂಡಿದೆ. ಮೊದಲ ದಿನ ನಡೆದ ಕನ್ನಡ ಪರೀಕ್ಷೆ ಶಾಂತಿ ಯುತವಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೇ ನಡೆದಿದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರು ಬೆಳಗ್ಗೆ ನಗರದ ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೊಠಡಿಗೆ ತೆರಳಿ ಪರೀಕ್ಷೆ ಬರೆಯಲು ಸಿದ್ಧರಾಗುತಿದ್ದ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿ ಶುಭ ಆರೈಸಿದರು.
ಪರೀಕ್ಷೆಯ ಮೊದಲ ದಿನವಾದ ಇಂದು ಕನ್ನಡ ಹಾಗೂ ಅರೆಬಿಕ್ ಪರೀಕ್ಷೆಗಳು ನಡೆದವು. ಜಿಲ್ಲೆಯ ಒಟ್ಟು 28 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 9488 ಮಂದಿ ಕನ್ನಡ ಪರೀಕ್ಷೆಗೆ ನೊಂದಣಿಗೊಂಡಿದ್ದು, ಇಂದು 9448 ಮಂದಿ ಪರೀಕ್ಷೆ ಬರೆದರು. ಒಟ್ಟು 40 ಮಂದಿ ಪರೀಕ್ಷೆಗೆ ಗೈರುಹಾಜರಾದರು.
ಉಡುಪಿಯ ವಿದ್ಯೋದಯ ಪ.ಪೂ.ಕಾಲೇಜು, ಕುಂದಾಪುರದ ಭಂಡಾರಕಾಕ್ಸ್ ಪ.ಪೂ.ಕಾಲೇಜುಗಳಲ್ಲಿ ತಲಾ ಐವರು ಗೈರಾದರೆ, ಉಡುಪಿಯ ಪೂರ್ಣ ಪ್ರಜ್ಞ ಹಾಗೂ ನಾವುಂದದ ಸರಕಾರಿ ಪ.ಪೂ.ಕಾಲೇಜು ಗಳಲ್ಲಿ ತಲಾ ನಾಲ್ವರು ಗೈರಾಹಾಜರಾಗಿದ್ದರು.
ಅರೆಬಿಕ್ ಭಾಷಾ ಪರೀಕ್ಷೆಗೆ ಕಟಪಾಡಿಯ ಎಸ್‌ವಿಎಸ್ ಪ.ಪೂ. ಕಾಲೇಜಿನಲ್ಲಿ ಇಬ್ಬರು ನೊಂದಾಯಿಸಿಕೊಂಡಿದ್ದು, ಇಬ್ಬರೂ ಪರೀಕ್ಷೆ ಬರೆದಿದ್ದಾರೆ.