ಕೋಡಿ| 47ನೇ ಸ್ವಚ್ಛ ಕಡಲತೀರ ಅಭಿಯಾನ: ಜಾಥಾ-ಮಾನವ ಸರಪಳಿ
ಕುಂದಾಪುರ, ಜೂ.6: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಕುಂದಾಪುರ ಪುರಸಭೆಯ ಸಹಯೋಗ ದೊಂದಿಗೆ 47ನೇ ಸ್ವಚ್ಛ ಕಡಲತೀರ ಅಭಿಯಾನ ಹಾಗೂ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬೃಹತ್ ಜಾಥಾ ಹಾಗೂ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಪುರಸಭೆಯ ಮುಖ್ಯಾಧಿ ಕಾರಿ ಆನಂದ್ ಜಿ. ಮಾತನಾಡಿ, ನಾವೆಲ್ಲರೂ ಒಟ್ಟಾಗಿ ಶ್ರಮಿಸಿ ಹಸಿರಾದ ಆರೋಗ್ಯಕರವಾದ ಸುಸ್ಥಿರ ವಾದ ಭವಿಷ್ಯವನ್ನು ನಿರ್ಮಿಸೋಣ’ ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ. ಆಸಿಫ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತ ನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸುವುದರ ಮೂಲಕ ಇಡೀ ಭೂಮಿಯ ರಕ್ಷಣೆಯನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕೋಡಿ ಚಕ್ರೇಶ್ವರಿ ದೇವಸ್ಥಾನದ ಧರ್ಮದರ್ಶಿ ಗೋಪಾಲ ಪೂಜಾರಿ ಮಾತನಾಡಿ, ಸಂಸ್ಥೆಯು ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಸಮುದ್ರ ತೀರವನ್ನು ಸ್ವಚ್ಛಗೊಳಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು ಈ ಕಾರ್ಯಕ್ರಮವು ಹೀಗೆಯೇ ಮುಂದುವರಿಯುವಂತಾಗಲಿ ಎಂದು ಹಾರೈಸಿದರು.
ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿ, ನಾವುಗಳು ನಮ್ಮ ಮುಂದಿನ ಪೀಳಿಗೆಗೆ ಮತ್ತು ಮಕ್ಕಳಿಗೆ ಶುದ್ಧವಾದ ಗಾಳಿ ಹಾಗೂ ಶುದ್ಧವಾದ ನೀರನ್ನು ಒದಗಿಸಬೇಕಾದರೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ಕಡಿಮೆಗೊಳಿಸ ಬೇಕು ಎಂದರು.
ಕುಂದಾಪುರದ ಪುರಸಭೆಯ ಆರೋಗ್ಯ ನಿರೀಕ್ಷಕ ರಾಘವೇಂದ್ರ, ಕುಂದಾಪುರ ಪುರಸಭೆಯ ಪರಿಸರ ಅಧಿಕಾರಿ ಗುರುಪ್ರಸಾದ್ ಶೆಟ್ಟಿ, ರೀಫ್ ವಾಚ್‌ನ ಸದಸ್ಯರು, ಶಾಲಾಭಿವೃದ್ಧಿ ಸಮಿತಿ, ಸಲಹಾ ಮಂಡಳಿ ಮತ್ತು ರಕ್ಷಕ-ಶಿಕ್ಷಕ ಸಮಿತಿಯ ಸದಸ್ಯರು, ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಶೆಟ್ಟಿ, ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಬಳಿಕ ಬ್ಯಾರೀಸ್ ಕ್ಯಾಂಪಸ್‌ನಿಂದ ಕೋಡಿ ಸೀವಾಕ್‌ವರೆಗೆ ಪರಿಸರ ಸಂರಕ್ಷಣೆಯ ಘೋಷಣೆಯೊಂದಿಗೆ ನಡಿಗೆ ಜಾಥಾ ನಡೆಯಿತು. ಅಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಜ್ಞಾವಿಧಿ ಕೈಗೊಳ್ಳಲಾಯಿತು. ಉಪನ್ಯಾಸಕರಾದ ಅನಂತ್ ಕುಮಾರ್ ಭಟ್ ಮತ್ತು ಸುಮನ ಕಾರ್ಯಕ್ರಮ ನಿರ್ವಹಿಸಿದರು.