×
Ad

ಪ್ರಾಕೃತಿಕ ವಿಕೋಪ ಎದುರಿಸಲು ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ: ಅಧಿಕಾರಿಗಳಿಗೆ ಸಚಿವ ಯು.ಟಿ.ಖಾದರ್ ಸೂಚನೆ

Update: 2026-07-04 22:28 IST

ಉಡುಪಿ, ಜು.4: ಮಳೆಗಾಲದ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ನೆರೆಯಿಂದ ಸಮಸ್ಯೆ ಉಂಟಾದಾಗ ತಕ್ಷಣವೇ ಸ್ಪಂದಿಸ ಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಫರೀದ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.

ಶನಿವಾರ ಸಂಜೆ ಮಣಿಪಾಲದ ಜಿಲ್ಲಾ ಪಂಚಾಯತ್ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಳೆಯಿಂದ ಆಗಿರುವ ಹಾನಿ ಹಾಗೂ ಕುಡಿಯುವ ನೀರಿನ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆಯಿಂದ ನೆರೆ, ಸಿಡಿಲು ಸೇರಿದಂತೆ ವಿವಿಧ ಅವಘಡಗಳು ಉಂಟಾದಾಗ, ಆಯಾ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓಗಳು ಅವರಿಗೆ ಸಾಂತ್ವನ ನೀಡಿ ಮಾನಸಿಕವಾಗಿ ಆತ್ಮವಿಶ್ವಾಸ ಮೂಡಿ ಸುವುದಲ್ಲದೇ, ಸರಕಾರದಿಂದ ನಿಯಮಾನುಸಾರ ಸಿಗುವ ಪರಿಹಾರ ಗಳನ್ನು ಕೂಡಲೇ ನೀಡಲು ಕಾರ್ಯ ಪ್ರವೃತ್ತರಾಗಬೇಕು. ಸಂತ್ರಸ್ಥರಲ್ಲಿ ಅನಾಥ ಭಾವನೆ ಬಾರದಂತೆ ಎಚ್ಚರ ವಹಿಸಬೇಕು ಎಂದರು.

ಮಳೆ ಸೇರಿದಂತೆ ವಿವಿಧ ರೀತಿಯ ಪ್ರಕೃತಿ ವಿಕೋಪಗಳಿಂದ ತೊಂದರೆ ಉಂಟಾದಲ್ಲಿ ಅವರಿಗೆ ತುರ್ತಾಗಿ 5 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡಬೇಕು. ಒಂದೊಮ್ಮೆ ಮರಣ ಸಂಭವಿಸಿದಲ್ಲಿ 5 ಲಕ್ಷ ಪರಿಹಾರ, ಸಂಪೂರ್ಣವಾಗಿ ಮನೆಗೆ ಹಾನಿ ಉಂಟಾದರೆ 1 ಲಕ್ಷ 20 ಸಾವಿರ ಇದರ ಜೊತೆ ಹೆಚ್ಚುವರಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ನಿಂದ 3 ಲಕ್ಷ 75 ಸಾವಿರ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲು ಬೇಕಾದ ನೆರವನ್ನು ನೀಡಬೇಕು ಎಂದು ಸೂಚಿಸಿದರು.

ಕಾನೂನು ಅನುಷ್ಠಾನ ಮಾಡಲು ಕೆಲವು ತೊಡಕುಗಳು ಇರುತ್ತವೆ. ಅಧಿಕಾರಿಗಳು ಬುದ್ಧಿವಂತಿಕೆಯಿಂದ ಮಾನ ವೀಯ ನೆಲೆಗಟ್ಟಿನಲ್ಲಿ ಅವುಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಉಪಯೋಗ ಮಾಡಿ ಕೊಡಬೇಕು ಎಂದರು.

ಸೋರುವ ಕೊಠಡಿಯಲ್ಲಿ ಪಾಠ ಬೇಡ: ಮಳೆಗಾಲ ಈಗಾಗಲೇ ಪ್ರಾರಂಭವಾಗಿದ್ದು, ಶಾಲಾ ಕೊಠಡಿಗಳು ಸೋರು ತ್ತಿದ್ದರೆ, ದುರಸ್ತಿ ಗೊಳಪಟ್ಟಿದ್ದರೆ ಅಂತಹ ಶಾಲಾ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವ ಖಾದರ್, ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ ಕುರಿತಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಗಳನ್ನು ಕೇಳಿ ಪಡೆದರು. ಬಾಕಿ ಉಳಿದವುಗಳನ್ನು ಕೂಡಲೇ ವಿತರಿಸಲು ಸೂಚನೆ ನೀಡಿದರು.

ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಆಗದಂತೆ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಮಳೆಯಿಂದಾಗಿ ಜನ, ಜಾನುವಾರುಗಳ ಪ್ರಾಣ ಹಾನಿಯಾದಲ್ಲಿ ತ್ವರಿತವಾಗಿ ಪರಿಹಾರ ಮೊತ್ತವನ್ನು ವಿತರಿಸಬೇಕು ಎಂದರು.

ಮಳೆಗಾಲದ ಹಿನ್ನಲೆಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಸಂಭವವಿದ್ದು ಈ ಕುರಿತು ಆರೋಗ್ಯ ಇಲಾಖೆಯಿಂದ ಅಗತ್ಯದ ಸಿದ್ಧತೆ ಮಾಡಿಕೊಳ್ಳಬೇಕು. ಜೊತೆಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕು. ಸೊಳ್ಳೆ ಉತ್ಪಾದನಾ ಸ್ಥಳವಾಗಿರುವ ವಾಣಿಜ್ಯ ಸಂಸ್ಥೆಗಳ ಲೈಸನ್ಸ್‌ಗಳನ್ನು ರದ್ದು ಮಾಡಬೇಕು. ಡೆಂಗಿ, ಮಲೇರಿಯಾ, ಚಿಕನ್ ಗುನ್ಯಾ ಉಲ್ಬಣಗೊಂಡ ಸ್ಥಳಗಳಲ್ಲಿ ಫಾಗಿಂಗ್ ಮತ್ತಿತರ ನಿಯಂತ್ರಣ ಕ್ರಮಗಳನ್ನು ಮಾಡಿ ಹತೋಟಿಗೆ ಮುಂದಾಗಬೇಕು. ಬೀದಿ ನಾಯಿಗಳ ನಿಯಂ ತ್ರಣಕ್ಕೆ ಅಗತ್ಯ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳು ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಆಗದಂತೆ ನಿಗಾವಹಿಸಬೇಕು. ತೋಟಗಾರಿಕಾ ಬೆಳೆಗಳ ಕೀಟಬಾಧೆಗೆ ರೈತರಿಗೆ ಅವುಗಳ ನಿಯಂತ್ರಣ ಕೈಗೊಳ್ಳುವ ಬಗ್ಗೆ ಅರಿವು ಮೂಡಿಸಿ ಹೆಚ್ಚು ರೈತರು ಬೆಳೆ ವಿಮೆ ಹೊಂದುವಂತೆ ಮಾಡಬೇಕು ಎಂದರು.

ಮಳೆಯಿಂದಾಗಿ ರಸ್ತೆಗಳಲ್ಲಿ ಹೊಂಡ ಬಿದ್ದಲ್ಲಿ ತಕ್ಷಣಕ್ಕೆ ಸ್ಪಂದಿಸಬೇಕು. ಉದಾಸೀನ ಅಥವಾ ನಿರ್ಲಕ್ಷ್ಯದಿಂದ ತಡವಾ ದರೆ ಅನಾಹುತ ಉಂಟಾಗಿ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಜನರು ಜನಪ್ರತಿನಿಧಿಗಳನ್ನು ದೂಷಿಸುತ್ತಾರೆ. ಇದಕ್ಕೆ ಆಸ್ಪದ ನೀಡಬಾರದು ಎಂದ ಅವರು ರಸ್ತೆಯ ಎರಡೂ ಬದಿಯ ಚರಂಡಿಯಲ್ಲಿ ನೀರು ವ್ಯವಸ್ಥಿತವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಅವರು ಲೋಕೋಪಯೋಗಿ ಅಭಿಯಂತರರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲೆಯ ಶಾಸಕರಾದ ಯಶ್ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ ಎ ಗಫೂರ್, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಅರಣ್ಯ ಸಂರಕ್ಷಣಾಧಿಕಾರಿ ರುಥೇನ್ ಮತ್ತಿತರರು ಉಪಸ್ಥಿತರಿದ್ದರು.

ಸಮನ್ವಯ ಸಮಿತಿ ರಚಿಸಿ

ಪ್ರಕೃತಿ ವಿಕೋಪಗಳಿಗೆ ಕೂಡಲೇ ಸ್ಪಂದಿಸಲು ಅರಣ್ಯ ಇಲಾಖೆ, ಮೆಸ್ಕಾಂ, ಗ್ರಾಮೀಣ ಅಭಿವೃದ್ಧಿ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಮನ್ವಯ ಸಮಿತಿಗಳನ್ನು ರಚಿಸಿಕೊಂಡು ಮುಂದಿನ ಮೂರು ತಿಂಗಳ ಮಳೆಗಾಲದಲ್ಲಿ ನಿರ್ವಹಿಸಲು ಮುಂದಾಗಬೇಕು ಎಂದು ಯು.ಟಿ.ಖಾದರ್ ನಿರ್ದೇಶನ ನೀಡಿದರು.

ಪೊಲೀಸ್, ಅಗ್ನಿಶಾಮಕ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳ ತಂಡವು ರಕ್ಷಣಾ ಕಾರ್ಯಾಚರಣೆ ಮಾಡಲು ತಂಡವಾಗಿ ಸಿದ್ಧರಿದ್ದು ಜನರಿಗೆ ತಕ್ಷಣವೇ ಸ್ಪಂದಿಸಬೇಕು ಎಂದೂ ಅವರು ಸೂಚನೆ ನೀಡಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News