ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಇಓ, ಸಿಬ್ಬಂದಿಗೆ ನಿಂದನೆ: ಆರೋಪಿ ವಿರುದ್ಧ ಪ್ರಕರಣ ದಾಖಲು
ಕೋಟ, ಜು.4: ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಇಓ, ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಸಂಘದ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರವೀಣ ಕುಲಾಲ್ ಎಂಬಾತ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಆಸ್ತಿ ಅಡಮಾನ ಇರಿಸಿ ಸಾಲ ಪಡೆದುಕೊಂಡಿದ್ದು, ಸಾಲ ಮರುಪಾವತಿ ಮಾಡದೇ ಇರುವ ಕಾರಣ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು.
ಅದು ಡಿಕ್ರಿ ಆಗಿ ಜೂ.29ರಂದು ಸಹಕಾರ ಸಂಘಗಳ ಮಾರಾಟಾಧಿಕಾರಿ ಯವರು ಸಾಲಕ್ಕೆ ಅಡಮಾನ ಇರಿಸಿದ ಆಸ್ತಿಯನ್ನು ಏಲಂ ಪ್ರಕ್ರಿಯೆ ಮಾಡಿದ್ದರು. ಈ ವಿಷಯದಲ್ಲಿ ಕೋಪಗೊಂಡ ಆರೋಪಿ ಪ್ರವೀಣ್ ಕುಲಾಲ್, ಜೂ.30ರಂದು ಬೆಳಿಗ್ಗೆ ಸಂಘದ ಕಛೇರಿಗೆ ಬಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ವತಿ ಎಂ. ಹಾಗೂ ಆಡಳಿತ ಮಂಡಳಿ ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿ, ಸಹಕಾರಿ ಸಂಘದ ಬಗ್ಗೆ ಅವಹೇಳನಕಾರಿ ಯಾಗಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದಾಗಿ ದೂರಲಾಗಿದೆ.