×
Ad

ಎಸೆಸೆಲ್ಸಿ ಕನ್ನಡ ವಿಷಯದಲ್ಲಿ 1.62 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣ: ಕಾರಣ ತಿಳಿಯಲು ಡಾ.ನಿರಂಜನಾರಾಧ್ಯರ ನೇತೃತ್ವದಲ್ಲಿ ಸಮಿತಿ ರಚನೆ

Update: 2025-07-23 21:14 IST

ಗುಲ್ವಾಡಿ (ಕುಂದಾಪುರ), ಜು.23: ರಾಜ್ಯದಲ್ಲಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 1.62 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣ ರಾಗಿದ್ದು, ಇದಕ್ಕೆ ಕಾರಣ ಕಂಡುಕೊಳ್ಳಲು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯರ ಸಂಚಾಲಕತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಎರಡು ತಿಂಗಳಿನೊಳಗೆ ವರದಿ ಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಿರಿಯ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

117 ವರ್ಷಗಳ ಇತಿಹಾಸವಿರುವ ಗ್ರಾಮೀಣ ಪ್ರದೇಶವಾದ ಗುಲ್ವಾಡಿಯ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯನ್ನು ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿ ಯಲ್ಲಿ ಸಭೆಯ ವಿವರಗಳನ್ನು ನೀಡುತ್ತಾ ಡಾ.ಬಿಳಿಮಲೆ ಈ ವಿಷಯ ತಿಳಿಸಿದರು. ಪ್ರಾಧಿಕಾರದ ಸದಸ್ಯರ ಸಾಮಾನ್ಯ ಸಭೆಯನ್ನು 36 ವರ್ಷಗಳಲ್ಲೇ ಮೊದಲ ಬಾರಿಗೆ ವಿಧಾನಸೌಧದಿಂದ ಹೊರಗೆ ಗ್ರಾಮೀಣ ಪ್ರದೇಶದಲ್ಲಿ ನಡೆಸಲಾಯಿತು ಎಂದು ಅವರು ಹೆಮ್ಮೆಯಿಂದ ಹೇಳಿದರು.

ಕರಾವಳಿ ಜಿಲ್ಲೆಗಳಲ್ಲಿ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ ಸೇರಿದಂತೆ ಹಲವು ಮಾತೃಭಾಷೆ, ಮನೆ ಮಾತುಗಳಿದ್ದರೂ ಇಲ್ಲಿನ ವಿದ್ಯಾರ್ಥಿಗಳು ಕನ್ನಡ ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಇಲ್ಲಿ ಕನ್ನಡದಲ್ಲಿ ಅನುತ್ತೀರ್ಣರಾಗುವ ಮಕ್ಕಳ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಇಲ್ಲಿನ ಶಿಕ್ಷಕರು, ಆಡಳಿತ ವ್ಯವಸ್ಥೆ ಮುತುವರ್ಜಿ ಕಾರಣವಾಗಿದೆ ಎಂದ ಅವರು, ಆದರೆ ಮೈಸೂರು, ಮಂಡ್ಯದಲ್ಲಿ ಕನ್ನಡ ಮನೆ ಭಾಷೆ ಯಾದರೂ ಕೂಡ ಅಲ್ಲಿ ಕನ್ನಡ ವಿಷಯದಲ್ಲಿ ಅನುತ್ತೀರ್ಣ ರಾಗುವ ಮಕ್ಕಳ ಸಂಖ್ಯೆ ಹೆಚ್ಚಿರುವುದು ಕನ್ನಡದ ದೃಷ್ಟಿಯಿಂದ ತೀರಾ ಕಳವಳಕರ ಸಂಗತಿ ಎಂದವರು ಹೇಳಿದರು.

ಈ ಸಲದ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 1.62 ಲಕ್ಷ ಮಂದಿ ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣ ರಾಗಿದ್ದಾರೆ. ಇದಕ್ಕೆ ಕಾರಣ ಕಂಡುಕೊಳ್ಳಲು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಸಂಚಾಲಕತ್ವದಲ್ಲಿ ಸಮಿತಿ ರಚಿಸಿ 2 ತಿಂಗಳಿನೊಳಗೆ ವರದಿ ಸಲ್ಲಿಸಲು ತಿಳಿಸಲಾಗಿದೆ. ಈ ವರದಿಯನ್ನು ಪ್ರಾಧಿಕಾರ ಸರಕಾರಕ್ಕೆ ಕ್ರಮಕ್ಕಾಗಿ ಸಲ್ಲಿಸಲಿದೆ ಎಂದರು.

ಸ್ಥಳನಾಮ ಬದಲಾಯಿಸಲು ಹಕ್ಕಿಲ್ಲ: ಚಾರಿತ್ರಿಕ ಸ್ಥಳ ನಾಮಗಳನ್ನು ಬದಲು ಮಾಡುವ ಹಕ್ಕು ಯಾರಿಗೂ ಇಲ್ಲ. ಪಾರಂಪರಿಕ ಊರುಗಳ ಹೆಸರು ಬದಲಾವಣೆ ಮಾಡುವ ಯಾವುದೇ ಹುನ್ನಾರ, ಇತಿಹಾಸ ಅಳಿಸು ವುದು ಸರಿಯಲ್ಲ. ಹೊಸ ಊರು ಕಟ್ಟುವಾಗ ಏನು ಬೇಕಾದರೂ ಮಾಡಿ. ಆದರೆ ಈಗಿರುವ 71 ಸಾವಿರ ಹಳೆ ಊರುಗಳ ಹೆಸರು ಮಾರ್ಪಾಡು ಮಾಡಬಾರದು ಎಂಬ ನಿಲುವನ್ನು ಪ್ರಾಧಿಕಾರ ತೆಗೆದುಕೊಂಡಿದೆ ಎಂದರು.

ಈ ಬಗ್ಗೆ ತಜ್ಞರಿಂದ ವಿಡಿಯೋ, ಮಕ್ಕಳಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿ ಆಸುಪಾಸುಗಳಲ್ಲಿ ಊರುಗಳ ನಾಮಫಲಕ ಅಳವಡಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆಯಕಟ್ಟಿನ ಸ್ಥಳ, ಮಾರುಕಟ್ಟೆ, ಶಾಲೆ ನಾಮಫಲಕಗಳಲ್ಲಿ ಕನ್ನಡದ ಊರಿನ ಹೆಸರಿರುವ ಫಲಕ ಅಳವಡಿಸಲು ಕ್ರಮವಹಿಸಬೇಕು ಎಂಬುದು ಪ್ರಾಧಿಕಾರದ ನಿಲುವು ಎಂದರು.

ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್, ಸದಸ್ಯರಾದ ಯಾಕೂಬ್ ಖಾದರ್ ಗುಲ್ವಾಡಿ, ವಿ.ಪಿ ನಿರಂಜನಾರಾಧ್ಯ, ಎ.ಬಿ ರಾಮಚಂದ್ರಪ್ಪ, ರವಿಕುಮಾರ್ ನೆಹ, ಟಿ. ಗುರುರಾಜ್, ಟಿ. ತಿಮ್ಮೇಶ್, ವಿರುಪಣ್ಣ ಕಲ್ಲೂರ, ವೆಂಕಟೇಶ್, ಆಪ್ತ ಕಾರ್ಯದರ್ಶಿ ಫಣಿಕುಮಾರ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸಭೆಯಲ್ಲಿ ಉಪಸ್ಥಿತರಿದ್ದರು.

‘31 ಜಿಲ್ಲೆಗಳಿಗೆ 31 ಲಕ್ಷ ನೀಡುವ ಮೂಲಕ ಕನ್ನಡ ಪರ ಕಾರ್ಯಕ್ರಮ ನಡೆಸಲು ಉತ್ತೇಜನ ನೀಡಲು ನಿರ್ಣಯಿಸಲಾಗಿದೆ. ಜಿಲ್ಲೆಗೆ ನೀಡಲಾದ ಅನುದಾನದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸದಸ್ಯರು ಕಾರ್ಯಕ್ರಮ ರೂಪಿಸಬಹುದು.

-ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ವಿಧಾನಸೌಧದಿಂದ ಹೊರಗೆ ಮೊದಲ ಪ್ರಾಧಿಕಾರ ಸಭೆ

ಶತಮಾನದ ಇತಿಹಾಸವಿರುವ ಗುಲ್ವಾಡಿ ಶಾಲೆಯಲ್ಲಿ ಈ ಬಾರಿ ಪ್ರಾಧಿಕಾರದ ಸಭೆ ನಡೆಸಿದ್ದು ಐತಿಹಾಸಿಕ ವಿಚಾರವಾಗಿದೆ. ವಿಧಾನಸೌಧದಲ್ಲಿ ನಡೆಯುತ್ತಿದ್ದ ಈ ಸಭೆ ಗ್ರಾಮವೊಂದರ ಕನ್ನಡ ಶಾಲೆ ಯಲ್ಲಿ ನಡೆದಿದ್ದು ಒಂದಷ್ಟು ಮಹತ್ವದ ನಿರ್ಣಯಗಳನ್ನು ಇಲ್ಲಿ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು ’ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಗುಲ್ವಾಡಿಯೂ ಕೂಡ ವಿವಿಧ ಸ್ತರಗಳಲ್ಲಿ ಐತಿಹಾಸಿಕವಾಗಿದ್ದು ಇಲ್ಲಿ ಸಭೆ ನಡೆಸಿದ್ದು ಮುಂದೆಯೂ ಕುಗ್ರಾಮಗಳಲ್ಲಿ ಸಭೆ ನಡೆಸಿ ಅಲ್ಲಿನ ವಿಚಾರಗಳನ್ನು ನಮ್ಮ ಪ್ರಾಧಿಕಾರದ ಕಾರ್ಯವ್ಯಾಪ್ತಿಯಲ್ಲಿ ಸರಕಾರದ ಮುಂದಿಡುವ ಪ್ರಾಮಾಣಿಕ ಕಾರ್ಯ ನಡೆಸುತ್ತೇವೆ ಎಂದವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News