×
Ad

ಆ.17: ಯಕ್ಷ ನಕ್ಷತ್ರ ಟ್ರಸ್ಟ್‌ನಿಂದ ಕಿರಾಡಿ ಯಕ್ಷ ಪ್ರಣತಿ- 2025, ಕಲಾವಿದರಿಗೆ ಸನ್ಮಾನ

Update: 2025-08-16 22:41 IST

ಉಡುಪಿ, ಆ.16: ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ ಆವರ್ಸೆ ಇದರ ಮೂರನೇ ವಾರ್ಷಿಕೋತ್ಸವ ‘ಕಿರಾಡಿ ಯಕ್ಷ ಪ್ರಣತಿ-2025’ ಆ.17ರ ರವಿವಾರ ಬೆಳಗ್ಗೆ 9ರಿಂದ ಮಧ್ಯರಾತ್ರಿ 12ಗಂಟೆಯವರೆಗೆ ವೈವಿಧ್ಯಮಯ ಕಾರ್ಯಕ್ರಮ ಹಾಗೂ ವಿವಿಧ ಸನ್ಮಾನ ಕಾರ್ಯಕ್ರಮಗಳೊಂದಿಗೆ ಮಂದಾರ್ತಿ ಶೇಡಿಕೊಡ್ಲು ದುರ್ಗಾ ಸನ್ನಿಧಿಯಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಮೊಗವೀರ ಕಿರಾಡಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ಬಾರಿಯೂ ನೀಡುವ ಯಕ್ಷ ನಕ್ಷತ್ರ ಪ್ರಶಸ್ತಿ-2025ಕ್ಕೆ ಖ್ಯಾತ ಯಕ್ಷಗಾನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ಯಕ್ಷ ನಕ್ಷತ್ರ ಕಲಾಪೋಷಕ ಪ್ರಶಸ್ತಿಗೆ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಇವರು ಆಯ್ಕೆಯಾಗಿದ್ದಾರೆ ಎಂದರು.

ಹಿರಿಯ ಕಲಾವಿದರಾದ ದೇವದಾಸ ಶೆಣೈ ಆರ್ಗೋಡು, ಎಂ.ಕೆ.ರಮೇಶ್ ಆಚಾರ್ಯ, ನರಾಡಿ ಬೋಜರಾಜ ಶೆಟ್ಟಿ, ರಮೇಶ ಬೆಲ್ತೂರು, ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಹಾಗೂ ನಾಗೂರು ಶೀನ ದೇವಾಡಿಗರಿಗೆ ಯಕ್ಷ ಪ್ರಣತಿ ಗೌರವ ಸನ್ಮಾನ, ಪ್ರತಿಭಾನ್ವಿತ ಕಲಾವಿದರಾದ ಶಶಿಕಾಂತ ಶೆಟ್ಟಿ ಕಾರ್ಕಳ, ಈಶ್ವರ ನಾಯ್ಕ ಮಂಕಿ, ಡಾ.ಪ್ರಖ್ಯಾತ ಶೆಟ್ಟಿ, ಸುದಾಕರ ಕೊಠಾರಿ ಯಶಜಿತ್, ಗಣೇಶ ನಾಯ್ಕ ಎಡಮೊಗೆ, ಗೋವಿಂದ ಮೊಗವೀರ ವಂಡಾರು ಇವರಿಗೆ ಪ್ರೋತ್ಸಾಹಕ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.

ಅಲ್ಲದೇ ಚಾರ ನಾಗಯ್ಯ ಶೆಟ್ಟಿ, ವಿಠಲ್ ಕುಲಾಲ್ ಬೆಂಗಳೂರು, ಹಳ್ಳಿ ರಾಮಚಂದ್ರ ಶಾಸ್ತ್ರ, ಹರೀಶ್ ಶೆಟ್ಟಿ ಮಂದಾರ್ತಿ, ರಾಘವೇಂದ್ರ ಚಂದನ್, ರಮೇಶ್ ಕುಲಾಲ್ ಇವರಿಗೆ ಕಲಾಪೋಷಕ ಗೌರವ ಪುರಸ್ಕಾರ ನೀಡಲಾಗುವುದು ಎಂದರು.

ಬೆಳಗ್ಗೆ 9:30ಕ್ಕೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ತೆಂಕು ಮತ್ತು ಬಡಗುತಿಟ್ಟಿನ ಬಾಗವತರಿಂದ ಗಾನವೈಭವ ನಡೆಯಲಿದೆ,11:30ಕ್ಕೆ ಕಾರ್ಯಕ್ರಮ ಮಂದಾರ್ತಿ ದೇವಸ್ಥಾನದ ಮೊಕ್ತೇಸರರಾದ ಎಚ್.ಧನಂಜಯ ಶೆಟ್ಟಿ ಇವರಿಂದ ಉದ್ಘಾಟನೆಗೊಳ್ಳಲಿದೆ.ಹೈದರಾಬಾದ್‌ನ ಉದ್ಯಮಿ ಕೃಷ್ಣಮೂರ್ತಿ ಮಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿಗಳಾದ ವಿಠಲ ಶೆಟ್ಟಿ ಶೇಡಿಕೊಡ್ಲು, ವಿಶ್ವನಾಥ ಹೆಗ್ಡೆ, ರಘುರಾಮ ದೇವಾಡಿಗ, ನರಸಿಂಹ ಕುಂದರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಸಂಜೆ 4:00ಗಂಟೆಗೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ.ಜಿ.ಶಂಕರ್, ಉದ್ಯಮಿ ಆನಂದ ಸಿ.ಕುಂದರ್, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ,ಉದ್ಯಮಿ ಗಣೇಶ ಕಿಣಿ ಬೆಳ್ವೆ, ಪ್ರಸಾದ್‌ರಾಜ್ ಕಾಂಚನ್, ಗೋವಿಂದ ಬಾಬು ಪೂಜಾರಿ ಮುಂತಾದವರು ಉಪಸ್ಥಿತರಿರುವರು. ಅಪರಾಹ್ನ 2ಗಂಟೆಗೆ ಬೆಂಗಳೂರಿನ ಯಕ್ಷೇಶ್ವರಿ ಯಕ್ಷಗಾನ ತಂಡದ ಮಕ್ಕಳಿಂದ ಸುದರ್ಶನ ವಿಜಯ ಯಕ್ಷಗಾನ ಕಾರ್ಯಕ್ರಮವಿದ್ದು, ಸಂಜೆ ಸಭಾ ಕಾರ್ಯಕ್ರಮದ ಬಳಿಕ ತೆಂಕು ಮತ್ತು ಬಡಗಿನ ಪ್ರಸಿದ್ಧ ಕಲಾವಿದರಿಂದ ‘ಕಾಯಕಲ್ಪ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಸಂತೋಷ ಹಿಲಿಯಾಣ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಸಂದೇಶ ಶೆಟ್ಟಿ ಆರ್ಡಿ, ಪ್ರಶಾಂತ ಮೊಗವೀರ ನಡೂರು, ಅಶೋಕ ಕುಂದರ್ ಮಂದಾರ್ತಿ ನಾಗರಾಜ್ ಕುಂದರ್ ನಡೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News