ಮಾ.4: ಉಡುಪಿ ಡಿಸಿ ಕಚೇರಿ ಎದುರು ಪಂಚಾಯತ್‌ರಾಜ್ ಒಕ್ಕೂಟದ ಪ್ರತಿಭಟನೆ
ಉಡುಪಿ, ಮಾ.1: ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯಿದೆಯ ಅನ್ವಯ ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರಕಾರ ಗಳಾಗಿವೆ. ಆದರೆ ಪ್ರಸ್ತುತ ವಿವಿಧ ಹಂತದಲ್ಲಿ ಅಧಿಕಾರಶಾಹಿ ಆಡಳಿತ ವ್ಯವಸ್ಥೆ ಯಿಂದಾಗಿ ಗ್ರಾಪಂಗಳು ಸ್ಥಳೀಯ ಸ್ವಯಂ ಸರಕಾರಗಳಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸ್ಥಳೀಯ ಸರಕಾರಗಳ ಉಳಿವಿಗಾಗಿ ಒತ್ತಾಯಿಸಿ ಕುಂದಾಪುರ ತಾಲೂಕು ಪಂಚಾಯತ್‌ರಾಜ್ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಗ್ರಾಪಂಗಳ ಭಾಗವಹಿಸುವಿಕೆ ಯೊಂದಿಗೆ ಇದೇ ಮಾ.4ರ ಮಂಗಳವಾರ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಇಡೀ ದಿನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರ ಮತ್ತು ಬೈಂದೂರು ತಾಲೂಕು ಗಳ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಒಕ್ಕೂಟವಾದ ಕುಂದಾಪುರ ತಾಲೂಕು ಪಂಚಾಯತ್‌ರಾಜ್ ಒಕ್ಕೂಟ ಜಿಲ್ಲೆಯ ಎಲ್ಲಾ ಗ್ರಾಪಂಗಳ ಚುನಾಯಿತ ಪ್ರತಿನಿಧಿಗಳ ಬೆಂಬಲ ದೊಂದಿಗೆ ಸ್ಥಳೀಯ ಸರಕಾರದ ಉಳಿವಿಗಾಗಿ ಒಕ್ಕೊರಲ ಹೋರಾಟಕ್ಕೆ ಮುಂದಾಗಿದೆ ಎಂದವರು ಹೇಳಿದರು.
ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5:00ಗಂಟೆಯವರೆಗೆ ನಡೆಯುವ ಈ ಪ್ರತಿಭಟನೆಯಲ್ಲಿ ಜಿಲ್ಲೆಯ 700ರಿಂದ 800ರಷ್ಟು ಚುನಾಯಿತ ಗ್ರಾಪಂ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದ ಅವರು ಸಂವಿಧಾನದ ಆಶಯ ಹಾಗೂ ಕಾಯಿದೆಯ ಆಶಯಗಳಂತೆ ಗ್ರಾಪಂ ಸ್ಥಳೀಯ ಸ್ವಯಂ ಸರಕಾರ ವಾಗಿ ಉಳಿಯಬೇಕಾದರೆ ಇಂಥ ಒಂದು ಒಕ್ಕೊರಲ ಧ್ವನಿಯ ಹೋರಾಟದ ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟರು.
ಗ್ರಾಪಂಗಳು ಸ್ಥಳೀಯ ಸ್ವಯಂ ಸರಕಾರವಾಗಿ ಕಾರ್ಯನಿರ್ವಹಿಸುವಲ್ಲಿ ಇರುವ ಅಡಚಣೆಗಳ ಕುರಿತಂತೆ ರಾಜ್ಯಸರಕಾರದ ಗಮನ ಸೆಳೆಯಲು ಹಾಗೂ ನಮ್ಮೆಲ್ಲರ ಹಕ್ಕೊತ್ತಾಯವನ್ನು ಮಂಡಿಸಲು ಜಿಲ್ಲೆಯ ಎಲ್ಲಾ ಗ್ರಾಪಂಗಳ ಚುನಾಯಿತ ಪ್ರತಿನಿಧಿಗಳ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಒಟ್ಟು 12 ಪ್ರಮುಖ ಹಕ್ಕೊತ್ತಾಯಗಳು ಹಾಗೂ ಬೇಡಿಕೆಗಳನ್ನು ಮುಂದಿರಿಸಿಕೊಂಡು ನಮ್ಮ ಹೋರಾಟ ನಡೆಯಲಿದೆ. ಇವುಗಳಲ್ಲಿ ಗ್ರಾಪಂ ಗಳಿಗೆ ಸಿಬ್ಬಂದಿಗಳ ನೇಮಕಾತಿ, ಸಿಬ್ಬಂದಿಗಳ ಕೊರತೆ ನಿವಾರಣೆ, 25 ಸೆನ್ಸ್ ಒಳಗಿನ ಜಮೀನಿಗೆ ಏಕನಿವೇಶನ ನಕ್ಷೆ, ವಿನ್ಯಾಸಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಈ ಮೊದಲಿನಂತೆ ಗ್ರಾಪಂಗೆ ನೀಡಬೇಕು.
ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರವನ್ನು ಪಿಡಿಓ ಜೊತೆಗೆ ಅಧ್ಯಕ್ಷರ ಜಂಟಿ ಸಹಿಗೆ ಬದಲಾಯಿಸಬೇಕು. ರಾಜ್ಯಸರಕಾರದ ಶಾಸನಬದ್ಧ ಅನುದಾನದಲ್ಲಿ ಹೆಚ್ಚಳ. ನರೇಗಾ ಯೋಜನೆಯ ಅನುಷ್ಠಾನದಲ್ಲಿರುವ ಸಮಸ್ಯೆ ನಿವಾರಣೆ, ಗ್ರಾಪಂಗೆ ಕಿರಿಯ ಇಂಜಿನಿಯರ್ ನೇಮಕ, ಗ್ರಾಪಂ ಮಟ್ಟದ ಕೆಡಿಪಿ ಸಭೆಗಳ ಸ್ವರೂಪದಲ್ಲಿ ಬದಲಾವಣೆ ಸೇರಿದಂತೆ ತಮ್ಮ ನ್ಯಾಯಬದ್ಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಈ ಪ್ರತಿಭಟನೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಜನಾರ್ದನ ಮರವಂತೆ, ಬೈಂದೂರು ವಲಯ ಅಧ್ಯಕ್ಷ ಪ್ರದೀಪ್ ಕೊಠಾರಿ, ಕುಂದಾಪುರ ವಲಯ ಅದ್ಯಕ್ಷ ರಮೇಶ್ ಶೆಟ್ಟಿ ಹಾಗೂ ಶ್ರೀನಿವಾಸ ಗಾಣಿಗ ಉಪಸ್ಥಿತರಿದ್ದರು.