×
Ad

ಆಲೂರು ಆನಂದ ಪೂಜಾರಿಗೆ ವಾಷಿಂಗ್ಟನ್ ಅಡ್ವೆಂಟಿಸ್ಟ್ ವಿವಿಯಿಂದ ಗೌರವ ಡಾಕ್ಟರೇಟ್

Update: 2026-05-08 16:33 IST

ಉಡುಪಿ: ಅನಿವಾಸಿ ಉದ್ಯಮಿ ಆನಂದ ಪೂಜಾರಿಯವರಿಗೆ ಅಮೆರಿಕದ ಪ್ರತಿಷ್ಠಿತ ವಾಷಿಂಗ್ಟನ್ ಅಡ್ವೆಂಟಿಸ್ಟ್ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ ನೀಡಿದೆ.

ಇತ್ತೀಚೆಗೆ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ವಾಷಿಂಗ್ಟನ್ ಅಡ್ವೆಂಟಿಸ್ಟ್ ಯುನಿವರ್ಸಿಟಿಯ 111ನೇ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಸಕ್ತ ಅಮೆರಿಕದ ಮೆರಿಲ್ಯಾಂಡ್ ನಿವಾಸಿಯಾಗಿರುವ ಆನಂದ ಪೂಜಾರಿಯವರಿಗೆ ಬ್ಯುಸಿನೆಸ್ ಆಂಡ್ ಕಮ್ಯುನಿಟಿ ಸರ್ವೀಸಸ್ ನಲ್ಲಿ ಸಮಾಜಕ್ಕೆ ನೀಡಿರುವ ಅಸಾಧರಣ ಕೊಡುಗೆಗಾಗಿ ‘ಡಾಕ್ಟರ್ ಆಫ್ ಹ್ಯೂಮನ್ ಲೆಟರ್ಸ್' ಗೌರವ ಪದವಿ ನೀಡಿ ಗೌರವಿಸಲಾಗಿದೆ.


 



ವಾಷಿಂಗ್ಟನ್ ಅಡ್ವೆಂಟಿಸ್ಟ್ ವಿಶ್ವವಿದ್ಯಾನಿಲಯದ ಅಧ್ಯಕ್ಷ ವೇಯಮೌತ್ ಸ್ಪೆನ್ಸ್ ಅವರು ಆನಂದ ಪೂಜಾರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಈ ಸಂದರ್ಭ ಉಪಸ್ಥಿತರಿದ್ದ ಗ್ಲೋಬಲ್ ಅಲಯಂಟ್ ಐಎನ್ ಸಿಯ ಸಿಇಒ ಮತ್ತು ಅಧ್ಯಕ್ಷ ರಾಜನ್ ನಟರಾಜನ್, ಮಾತನಾಡಿ, "ಆನಂದ ಪೂಜಾರಿ ಈ ಡಾಕ್ಟರೇಟ್ ಗೌರವಕ್ಕೆ ಅತ್ಯಂತ ಅರ್ಹ ವ್ಯಕ್ತಿ. ಇದು ಅವರ ಸಮರ್ಪಣೆ, ಬದ್ಧತೆ ಮತ್ತು ಪರಿಶ್ರಮಕ್ಕೆ ದೊರೆತ ಪ್ರತಿಫಲ" ಎಂದು ಶುಭ ಹಾರೈಸಿದರು.

ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಆನಂದ ಪೂಜಾರಿ, "ಈ ಡಾಕ್ಟರೇಟ್ ಪದವಿ ನನಗೆ ಅತ್ಯಂತ ಗೌರವ ಮತ್ತು ಹೆಮ್ಮೆಯದ್ದಾಗಿದೆ. ನಾನೇನು ಅನುಕೂಲಸ್ಥ ಪರಿವಾರದ ಹಿನ್ನೆಲೆಯಿಂದ ಬಂದವನಲ್ಲ. ನಾನು ಆರಂಭದಿಂದಲೂ ಪರಿಶ್ರಮ, ಶಿಸ್ತು ಮತ್ತು ನಂಬಿಕೆಯನ್ನು ಜೀವನ ಮೌಲ್ಯವಾಗಿರಿಸಿಕೊಂಡವನು. ಈ ಮೌಲ್ಯಗಳು ನನ್ನ ಬದುಕಿನ ದೃಢವಾದ ತಳಗಟ್ಟಾಗಿ ಸಹಾಯ ಮಾಡಿವೆ. ಈ ಗೌರವ ಪದವಿಗೆ ನಾನೊಬ್ಬನೆ ಹಕ್ಕುದಾರನಲ್ಲ. ಇದಕ್ಕೆ ಸದಾ ಬೆಂಗಾವಲಾಗಿರುವ ನನ್ನ ಪತ್ನಿ ಸುಮಿತಾ, ಮಕ್ಕಳು ಮತ್ತು ನನ್ನೆಲ್ಲಾ ಹಿತಚಿಂತಕರೂ ಪಾಲುದಾರರಾಗಿದ್ದಾರೆ" ಎಂದರು.


 



ಆನಂದ ಪೂಜಾರಿ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರು ಎಂಬ ಗ್ರಾಮದವರು. ಆಲೂರಿನ ಸರಕಾರಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ ಮುಂಬೈಗೆ ತೆರಳಿದ ಅವರು, ಐದಾರು ವರ್ಷ ಹಗಲು ಹೊತ್ತು ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತ ರಾತ್ರಿ ಶಾಲೆ ಸೇರಿ ಪಿಯುಸಿ ಹಂತದವರೆಗೆ ಶಿಕ್ಷಣ ಮುಗಿಸಿದರು. ಬಳಿಕ ಅಣ್ಣ ದಿ. ಮಂಜುನಾಥ ಪೂಜಾರಿಯವರ ಮುತುವರ್ಜಿಯಿಂದ 1995ರಲ್ಲಿ ಅಮೆರಿಕಕ್ಕೆ ತೆರಳಿ ಹೊಟೇಲು ಉದ್ಯೋಗದಲ್ಲಿ ತೊಡಗಿಸಿಕೊಂಡರು. ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಮೇಲೇರಿ ಸ್ವಂತ ಹೋಟೆಲ್ ಉದ್ಯಮ ಆರಂಭಿಸಿದರು. ಅಮೆರಿಕದಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಕ್ಯಾಟರಿಂಗ್ ಸೇವೆ ನೀಡುತ್ತಿರುವ ಆನಂದ ಪೂಜಾರಿಯವರು, ಜುವೆಲ್ ಆಫ್ ಇಂಡಿಯಾ, ವುಡ್ ಲ್ಯಾಂಡ್ಸ್, ಉಡುಪಿ ರೆಸ್ಟೋರೆಂಟ್, ಪೂಜಾರಿ ಕನ್ಸಲ್ಟನ್ಸಿ, ಜಿಡಿ ಹಾಸ್ಪಿಟಾಲಿಟಿ ಮುಂತಾದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

(ವರದಿ: ಲೇಖಕ ಗೋಪಾಲ ತ್ರಾಸಿ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News