ಅಂಬೇಡ್ಕರ್ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟರು: ಕೋಟ
ಬ್ರಹ್ಮಾವರ: ಈ ದೇಶದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯದ ಬದುಕು ಕಲ್ಪಿಸಿಕೊಟ್ಟ, ಪ್ರಪಂಚದಲ್ಲೇ ಅತ್ಯುನ್ನತ ಸಂವಿಧಾನ ನೀಡಿದ ಮಹಾನ್ ಚೇತನ ಬಾಬಾಸಾಹೇಬ್ ಅಂಬೇಡ್ಕರ್ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬ್ರಹ್ಮಾವರ ತಾಲೂಕು ಶಾಖೆ ವತಿಯಿಂದ ಬ್ರಹ್ಮಾವರದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾದ ಬಾಬಾಸಾಹೇಬ್ ಅಂಬೇಡ್ಕರ್ ರವರ 70ನೇ ಪರಿನಿಬ್ಬಾಣ ದಿನದ ಪ್ರಯುಕ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವದ ಪುಷ್ಫ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಉಡುಪಿ ಜಿಪಂ ಮಾಜಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ ಮಾತನಾಡಿ, ಎಲ್ಲಾ ವರ್ಗ, ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ನೆಮ್ಮದಿಯಾಗಿ ಬಾಳಲಿಕ್ಕೆ ಬೇಕಾದ ಅವಕಾಶಗಳನ್ನು ಕಲ್ಪಿಸಿಕೊಟ್ಟ ಮಹಾ ಮೇಧಾವಿ ಬಾಬಾಸಾಹೇಬ್ ಅಂಬೇಡ್ಕರ್. ಅವರನ್ನು ಪ್ರತೀ ದಿನವೂ ನಾವು ಸ್ಮರಣೆ ಮಾಡಬೇಕು. ಅದರಲ್ಲೂ ಶಾಲಾ ಮಕ್ಕಳಿಗೆ ಅತೀ ಅಗತ್ಯವಾಗಿ ಅಂಬೇಡ್ಕರ್ ಮಹತ್ವದ ಬಗ್ಗೆ ತಿಳಿಸುವ ಕೆಲಸ ನಾವು ಮಾಡಬೇಕಾಗಿದೆ ಎಂದರು.
ಬ್ರಹ್ಮಾವರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ, ಅಂಬೇಡ್ಕರ್ ಒಂದು ಜಾತಿ, ಒಂದು ಧರ್ಮದ ನಾಯಕರಲ್ಲ. ಅವರು ಈ ದೇಶದ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶ ನೀಡಿದ ಮಹಾನ್ ನೇತಾರ. ಅಸ್ಪೃಶ್ಯತೆ, ಜೀತ ಪಧ್ಧತಿ ಯನ್ನು ಹೋಗಲಾಡಿಸಿದ ಮಾಹಾನ್ ಕ್ರಾಂತಿಕಾರಿ. ಸ್ವತಃ ತಾವು ಮೇಲ್ವರ್ಗದವರಿಂದ ಅನುಭವಿಸಿದ ಅವಮಾನ ಅಸ್ಪೃಶ್ಯತೆಗಳನ್ನು ಸಹಿಸಿ ಕೊಂಡು ನಮ್ಮ ಮುಂದಿನ ಪೀಳಿಗೆ ಸುಖ, ಸಂತೋಷ , ನೆಮ್ಮದಿಯ ಜೀವನ ನಡೆಸಬೇಕೆಂಬ ದೂರದೃಷ್ಟಿಯನ್ನು ನಮ್ಮ ದೇಶಕ್ಕೆ ಎಲ್ಲರಿಗೂ ಸಮಾನ ಅವಕಾಶ ಇರುವ ಸಂವಿಧಾನವನ್ನು ರಚಿಸಿಕೊಟ್ಟರು. ಅದನ್ನು ಸದಾ ನಾವು ನೆನಪಿನಲ್ಲಿ ಇಟ್ಟಕೊಳ್ಳಬೇಕು ಎಂದರು.
ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ರಾವ್ ಬಿ.ಆರ್., ಮಾಜಿ ಅಧ್ಯಕ್ಷ ನವೀನ್ ನಾಯಕ್, ಪಂಚಾಯತ್ ಸದಸ್ಯ ದೇವಾನಂದ ನಾಯಕ್, ನಗರಸಭೆ ಸದಸ್ಯ ವಿಜಯ ಕುಮಾರ್ ಕೊಡವುರು, ಬ್ರಹ್ಮಾವರ ವ್ಯವಸಾಯ ಸಹಕಾರ ಸಂಘದ ನಿರ್ದೇಶಕ ಎಸ್.ನಾರಾಯಣ, ದ.ಸಂ.ಸ. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಬ್ರಹ್ಮಾವರ ತಾಲೂಕು ಪ್ರಧಾನ ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ, ದಸಂಸ ಪದಾಧಿಕಾರಿಗಳಾದ ಕುಮಾರ್ ಕೋಟ, ಮಂಜುನಾಥ್ ಬಾಳ್ಕುದ್ರು, ಹರೀಶ್ಚಂದ್ರ ಕೆ.ಡಿ., ಸುಧಾಕರ ಮಾಸ್ಟರ್ ಗುಜ್ಜರಬೆಟ್ಟು, ಬಿರ್ತಿ ಸುರೇಶ, ಶಿವಾನಂದ ಬಿರ್ತಿ, ವಿಜಯ ಗಿಳಿಯಾರು, ಶ್ರೀನಿವಾಸ್ ವಡ್ಡರ್ಸೆ, ಪ್ರಕಾಶ್ ಹೇರೂರು, ಅನಿಲ ಬಿರ್ತಿ, ಚೈತನ್ಯ ಬಿರ್ತಿ, ಪ್ರಶಾಂತ್ ಬಿರ್ತಿ, ಶರತ್ ಆರೂರು, ಇದ್ರಿಸ್ ಹೂಡೆ ಉಪಸ್ಥಿತರಿದ್ದರು.