×
Ad

ಗ್ರಾಪಂ ಸಿಬ್ಬಂದಿಗೆ ಪಿಎಫ್- ಇಎಸ್‌ಐ ಸೌಲಭ್ಯ: ಉಡುಪಿ ಜಿಲ್ಲೆಯಲ್ಲಿ ರಾಜ್ಯಕ್ಕೆ ಮಾದರಿ ಅನುಷ್ಠಾನ

Update: 2025-12-08 20:26 IST

ಉಡುಪಿ: ಸ್ವಚ್ಛ ಭಾರತ್, ತೆರಿಗೆ ವಸೂಲಾತಿ ಹಾಗೂ ಹೊಸತನದ ಕಾರ್ಯ ಚಟುವಟಿಕೆಗಳ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯು ಇದೀಗ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಇ ಪಿಎಫ್ ಹಾಗೂ ಇಎಸ್‌ಐ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು, ಪ್ರಪ್ರಥಮ ಅನುಷ್ಠಾನದೊಂದಿಗೆ ರಾಜ್ಯದ ಮಾದರಿ ಜಿಲ್ಲೆಯಾಗಿ ಹೊರ ಹೊಮ್ಮಿದೆ.

ಗ್ರಾಮ ಪಂಚಾಯತ್ ನೌಕರರ ಬಹುದಿನಗಳ ಬೇಡಿಕೆಯಾದ ಭವಿಷ್ಯ ನಿಧಿ(ಪಿಎಫ್) ಹಾಗೂ ಆರೋಗ್ಯ ವಿಮಾ ಯೋಜನೆ(ಇಎಸ್‌ಐ)ಸೌಲಭ್ಯ ಒದಗಿಸಲು ಆರಂಭಿಕ ಹಂತದಲ್ಲಿ ಉಡುಪಿ, ಧಾರವಾಡ, ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡದಲ್ಲಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿತ್ತು. ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿ, ನೇಮಕಾತಿ ವಿಧಾನ ಹಾಗೂ ಇತರ ಸೇವಾ ಷರತ್ತುಗಳು) ನಿಯಮಗಳು 2022ರಲ್ಲಿನ ತಿದ್ದುಪಡಿ ಪ್ರಕಾರ ಜಿಲ್ಲೆಯ ಪ್ರತೀ ತಾಲೂಕು ಪಂಚಾಯತ್ ವ್ಯಾಪ್ತಿಯನ್ನು ಅನುಷ್ಠಾನ ಘಟಕವಾಗಿ ಪರಿಗಣಿಸಿ, ಗ್ರಾಪಂಗಳ ಅನುಮೋದಿತ ಸಿಬ್ಬಂದಿಗೆ ಭವಿಷ್ಯ ನಿಧಿ ಹಾಗೂ ಇಎಸ್‌ಐ ಸೌಲಭ್ಯ ಜಾರಿಗೆ ತರಲು ಉಲ್ಲೇಖಿಸಲಾಗಿತ್ತು.

ಧಾರವಾಡ, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾಗಶಃ ಅನುಷ್ಠಾನವಾಗಿದ್ದು, ಈ ಪೈಕಿ ವ್ಯವಸ್ಥಿತ ಪೂರ್ವಸಿದ್ಧತೆ ಹಾಗೂ ಸಮನ್ವಯದೊಂದಿಗೆ ಉಡುಪಿ ಜಿಲ್ಲೆ ಅನುಷ್ಠಾನ ಮಾಡುವುದರೊಂದಿಗೆ ಮಾದರಿಯಾಗಿ ಗುರುತಿಸಿಕೊಂಡಿದೆ.

ಪಾವತಿ ವಿಧಾನ: ಈ ಸೌಲಭ್ಯಕ್ಕಾಗಿ ನೌಕರರು ತಮ್ಮ ಮೂಲವೇತನ ಹಾಗೂ ತುಟ್ಟಿ ಭತ್ಯೆಯ ಶೇ.12ರಷ್ಟನ್ನು ಪಾವತಿಸಿದರೆ ಸಂಬಂಧಿಸಿದ ಗ್ರಾಮ ಪಂಚಾಯತ್ ತನ್ನ ಪಾಲನ್ನು ನೌಕರರ ಪಿಎಫ್ ವಂತಿಗೆ ಸಮನಾಗಿ ಪಾವತಿ ಮಾಡಲಿದೆ.

ಇಎಸ್‌ಐಗೆ ನೌಕರರು ಶೇ.0.75ರಷ್ಟು ಹಾಗೂ ಗ್ರಾಮ ಪಂಚಾಯತ್ ತನ್ನ ಪಾಲಿನ ಶೇ.3.25ರಷ್ಟು ಪಾವತಿಸಲಿದೆ. ಆರ್ಥಿಕ ಭದ್ರತೆ, ಉಳಿತಾಯ, ಪಿಂಚಣಿ ಸೇರಿದಂತೆ ವೈದ್ಯಕೀಯ ಆರೈಕೆ, ಅನಾರೋಗ್ಯ ನಿರ್ವಹಣೆ, ಹಾಗೂ ನಗದು ಸೌಲಭ್ಯಗಳು ಈ ವ್ಯಾಪ್ತಿಯಲ್ಲಿ ಅನ್ವಯವಾಗುವುದರಿಂದ ಗ್ರಾಮ ಪಂಚಾಯತ್ ನೌಕರರಿಗೆ ಉಪಯುಕ್ತವಾಗಲಿದೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಈ ಕುರಿತು ಆದ್ಯತೆಯೊಂದಿಗೆ ಗಮನಹರಿಸಿರುವುದರಿಂದ, ಈಗಾಗಲೇ ತಾಲೂಕು ಪಂಚಾಯತ್‌ಗಳಲ್ಲಿ ನಿಗದಿತ ಖಾತೆಯನ್ನು ತಾಪಂ ಇ.ಓ ಹಾಗೂ ಲೆಕ್ಕಾಧಿಕಾರಿಗಳ ಪದನಾಮದಲ್ಲಿ ತೆರೆಯಲಾಗಿದ್ದು, ಪ್ರಕ್ರಿಯೆಗಳನ್ನು ನಿರ್ವಹಿಸಲು ಮೇಲ್ವಿಚಾರಕರನ್ನೂ ನೇಮಕ ಮಾಡಿಕೊಳ್ಳಲಾಗಿದೆ.

ಇಎಸ್‌ಐ ಹಾಗೂ ಇಪಿಎಫ್ ಅಡಿಯಲ್ಲಿ ದೊರೆಯುವ ಸೌಲಭ್ಯಗಳ ಕುರಿತಂತೆ ಜಿಲ್ಲಾಮಟ್ಟದಲ್ಲಿ ಇಲಾಖೆಗಳ ಸಮನ್ವಯದೊಂದಿಗೆ ಎಲ್ಲಾ ಗ್ರಾಮ ಪಂಚಾಯತ್‌ನ ಸಿಬ್ಬಂದಿಗಳು ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಕಾರ್ಯಾಗಾರದ ಮೂಲಕ ಪೂರ್ಣ ಮಾಹಿತಿಯನ್ನೂ ನೀಡಲಾಗಿದೆ.

803 ಸಿಬ್ಬಂದಿಗಳಿಗೆ ಸೌಲಭ್ಯ:

ಉಡುಪಿ ಜಿಲ್ಲೆಯ 155 ಗ್ರಾಮ ಪಂಚಾಯತ್‌ಗಳ ಪೈಕಿ 654 ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ 149 ಗ್ರಂಥಾಲಯ ಮೇಲ್ವಿಚಾರಕರು ಈ ಸೌಲಭ್ಯ ಪಡೆಯಲಿದ್ದಾರೆ.

2008ರಿಂದಲೂ ಈ ಕುರಿತು ಹೋರಾಟ ನಡೆಸುತ್ತಿದ್ದ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಸೇವಾಭದ್ರತೆ ಹಾಗೂ ಆರೋಗ್ಯ ಸೌಲಭ್ಯದ ನಿಟ್ಟಿನಲ್ಲಿ ಇದು ಮಹತ್ತರವಾದ ಕೊಡುಗೆಯಾಗಿದೆ.

‘ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ತಾಲೂಕು ಮಟ್ಟದ ಘಟಕವಾಗಿ ಗ್ರಾಪಂ ನೌಕರರಿಗೆ ಭವಿಷ್ಯ ನಿಧಿ ಮತ್ತು ಇಎಸ್‌ಐ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಂಡ ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಬಾಯಲ್ ಅವರ ಕಾರ್ಯ ಅಭಿನಂದನೆಯ. ಇದು ರಾಜ್ಯದಲ್ಲಿಯೇ ಮಾದರಿಯಾದ ಪ್ರಯತ್ನವಾಗಿದ್ದು ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

-ಪದ್ಮನಾಭ ಆರ್.ಕುಲಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಕ.ರಾ.ಗ್ರಾ.ಪಂ.ನೌ.ಶ್ರೇ.ಸಂಘ

‘ಗ್ರಾಮ ಪಂಚಾಯತ್‌ಗಳ ಯೋಜನೆ ಹಾಗೂ ಸೌಲಭ್ಯಗಳನ್ನು ನಾಗರಿಕರಿಗೆ ತಲುಪಿಸಲು ಸಿಬ್ಬಂದಿಗಳ ಶ್ರಮ ಬಹುಮುಖ್ಯವಾದುದು. ಇಪಿಎಫ್ ಹಾಗೂ ಇಎಸ್‌ಐ ಸೌಲಭ್ಯಗಳ ಅನುಷ್ಠಾನಕ್ಕೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷರು- ಸದಸ್ಯರು, ಪಿಡಿಓ ಹಾಗೂ ಜಿ.ಪಂ. ತಾ.ಪಂ ಹಂತದ ಅಧಿಕಾರಿಗಳ ಸಹಕಾರ ಹಾಗೂ ಸಮನ್ವಯಕ್ಕಾಗಿ ಕೃತಜ್ಞತೆ ಗಳು’

-ಪ್ರತೀಕ್ ಬಾಯಲ್, ಸಿಇಒ, ಜಿಪಂ ಉಡುಪಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News