ಬ್ರಹ್ಮಾವರ: ಬ್ರಿಟನ್‌ನ BATH ವಿವಿಯಿಂದ ಪಿಎಚ್‌ಡಿ ಪಡೆದ ಹರೀಶ್ ಶೆಟ್ಟಿ
ಬ್ರಹ್ಮಾವರ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿ ಹರೀಶ್ ಶೆಟ್ಟಿ ಬಂಡ್ಸಾಲೆ ಇವರು ಇಂಗ್ಲೆಂಡ್‌ನ ಪ್ರತಿಷ್ಠಿತ ಬಾತ್ ಯೂನಿವರ್ಸಿಟಿಯಿಂದ ಪಿಹೆಚ್‌ಡಿ ಪದವಿ ಪಡೆದಿದ್ದಾರೆ. ಕಟ್ಟಡ ಕಾರ್ಮಿಕರ ಕುರಿತಂತೆ ಇವರು ಮಂಡಿಸಿದ ಸಂಶೋಧನಾ ಪ್ರಬಂಧ ಮೊದಲ ಹಂತದಲ್ಲೇ ಸ್ವೀಕೃತಗೊಂಡಿದ್ದು, ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಡಾ.ಹರೀಶ್ ಶೆಟ್ಟಿ ಬಂಡ್ಸಾಲೆ ಹಾರಾಡಿ ಗ್ರಾಮದ ಕೆಳಬಣಸಾಲೆ ಮನೆ ರತ್ನಾವತಿ ಶೆಟ್ಟಿ ಹಾಗೂ ಹಳುವಳ್ಳಿ- ಕೋಂಟಿಬೈಲು ಲಕ್ಷಣ ಶೆಟ್ಟಿ ಅವರ ಮಗನಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಹೊನ್ನಾಳ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಯಲ್ಲಿ ಪಡೆದು ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬ್ರಹ್ಮಾವರದ ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿದ್ದರು. ಹಾರಾಡಿಯ ಡಾ.ಎ.ವಿ ಬಾಳಿಗಾ ಕಾಲೇಜಿನಲ್ಲಿ ಬಿಎಸ್‌ಡಬ್ಲ್ಯೂ ಮುಗಿಸಿ ಮಂಗಳೂರಿನ ಡಾ. ಎಂ.ವಿ ಶೆಟ್ಟಿ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ ಪದವಿ ಪಡೆದಿದ್ದರು.
ಅಹಮ್ಮದಾಬಾದ್‌ನ ಐಐಎಂನಲ್ಲಿ ಪಿಎಚ್‌ಡಿಯನ್ನು ಪ್ರಾರಂಬಿಸಿ ಅಲ್ಲಿಂದ ಇಂಗ್ಲೆಂಡ್‌ನ ಪ್ರತಿಷ್ಠಿತ ಯೂನಿವರ್ಸಿಟಿ ಆಫ್ ಬಾತ್‌ನಿಂದ ಸ್ಕಾಲರ್‌ಶಿಪ್ ಪಡೆದು ಕಟ್ಟಡ ಕಾರ್ಮಿಕರ ಬಗ್ಗೆ ಆಳವಾದ ಅಧ್ಯಯನ ಮಾಡಿ ತಮ್ಮ ಪ್ರಬಂಧವನ್ನು ಮಂಡಿಸಿ, ಯಾವುದೇ ತಿದ್ದುಪಡಿ ಇಲ್ಲದೆ ಮೊದಲ ಹಂತದಲ್ಲೇ ಉತ್ತೀರ್ಣರಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.