ಕಾಪು ಮಾರಿಯಮ್ಮ ದೇವಳದ ಸಮಿತಿಯಲ್ಲಿ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ: ಸಚಿವರಿಗೆ ಮನವಿ
ಕಾಪು: ಕಾಪು ಹೊಸ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ವ್ಯವಸ್ಥಾಪನ ಸಮಿತಿಯಲ್ಲಿ ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡುವ ಬಗ್ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕಾಪು ಮಾರಿಯಮ್ಮನ ಪ್ರತಿಷ್ಠಾಪನ ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ಮೊಗವೀರ ಸಮುದಾಯದ ಜನರು ದೇವಳದ ಧಾರ್ಮಿಕ ಕೈಂಕರ್ಯವನ್ನು ಮಾಡಿಕೊಂಡು ಬಂದಿರುವುದು ಪ್ರಶಂಸನೀಯವಾಗಿದೆ. ಈ ಹಿಂದಿನಿಂದಲೂ ದೇವಸ್ಥಾನದ ಸಮಿತಿಯಲ್ಲಿ ಮೊಗವೀರ ಸಮಾಜದ ಇಬ್ಬರಿಗೆ ಪ್ರಾತಿನಿಧ್ಯ ನೀಡಲಾಗುತ್ತಿದ್ದು, ಅದರಂತೆ ಈಗಿನ ಸಮಿತಿಯಲ್ಲಿದ್ದ ಮೊಗವೀರ ಸಮುದಾಯದ ಪ್ರತಿನಿಧಿ ಶ್ರೀಧರ್ ಕಾಂಚನ್ ದೈವಾಧೀನರಾಗಿದ್ದಾರೆ. ಪ್ರಸ್ತುತ ದೇವಳದ ಆಡಳಿತ ಮಂಡಳಿಯ ವ್ಯವಸ್ಥಾಪನ ಸಮಿತಿಯಲ್ಲಿ ಮೊಗವೀರ ಸಮಾಜದ ಪ್ರತಿನಿಧಿಯನ್ನು ಆಯ್ಕೆ ಮಾಡದೆ ಇರುವುದು ವಿಷಾದನೀಯವಾಗಿದೆ.
ಈ ಸಮಿತಿಯಲ್ಲಿ ಬಂಟ ಸಮುದಾಯಕ್ಕೆ ಮೂರು, ಬಿಲ್ಲವ ಸಮಾಜಕ್ಕೆ ಎರಡು, ಬ್ರಾಹ್ಮಣ ಸಮಾಜಕ್ಕೆ ಎರಡು, ದೇವಾಡಿಗ ಸಮಾಜಕ್ಕೆ ೧ ಮತ್ತು ರಾಣಿ ಸಮಾಜಕ್ಕೆ ಒಂದು ಪ್ರಾತಿನಿಧ್ಯ ಇರುತ್ತದೆ. ಪ್ರಸ್ತುತ ರಚಿಸಿರುವ ಆಡಳಿತ ಮಂಡಳಿಯ ವ್ಯವಸ್ಥಾಪನ ಸಮಿತಿಯಲ್ಲಿ ಮೊಗವೀರ ಸಮುದಾಯದ ಪ್ರತಿನಿಧಿಗಳು ಇಲ್ಲದೆ ಇರುವುದು ದೊಡ್ಡ ಪ್ರಮಾದ ಆಗಿದೆ. ಆದ್ದರಿಂದ ಈ ಪ್ರಮಾದವನ್ನು ಸರಿಪಡಿಸುವಲ್ಲಿ ಹಿಂದಿನ ವ್ಯವಸ್ಥಾಪನ ಸಮಿತಿಯ ರಚನೆಯನ್ನು ಪುನರ್ ರಚಿಸಿ, ಸಮಿತಿಯಲ್ಲಿ ಚಂದ್ರಶೇಖರ ಕೆ.ಅಮೀನ್ ಕೈಪುಂಜಾಲು ಇವರಿಗೆ ಪ್ರಾತಿನಿಧ್ಯ ನೀಡುವುದರಿಂದ ಮೊಗವೀರ ಸಮಾಜಕ್ಕೆ ಆದ ಪ್ರಮಾದವನ್ನು ಸರಿಪಡಿಸಿದಂತಾಗುತ್ತದೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.