×
Ad

ಕರಾವಳಿ ಸಮುದ್ರದಲ್ಲಿ ಮೀನು ಲಭ್ಯತೆ ಅಧ್ಯಯನಕ್ಕೆ ಎಂಐಟಿ ಪ್ರಾಧ್ಯಾಪಕರ ನೇತೃತ್ವದ ತಂಡದ ನಿಯೋಜನೆ

Update: 2023-10-12 19:21 IST

ಡಾ.ಅನೀಶ್‌ ಕುಮಾರ್ ವಾರಿಯರ್, ಡಾ.ಕೆ.ಬಾಲಕೃಷ್ಣ

ಉಡುಪಿ, ಅ.12: ರಾಜ್ಯದ ಕರಾವಳಿ ವ್ಯಾಪ್ತಿಯ ಅರಬಿಸಮುದ್ರದಲ್ಲಿ ಮೀನುಗಳ ಲಭ್ಯತೆ ವಲಯಗಳ ಅಧ್ಯಯನಕ್ಕೆ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹವಾಮಾನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಅನೀಶ್‌ಕುಮಾರ್ ವಾರಿಯರ್ ನೇತೃತ್ವದ ತಂಡವನ್ನು ನಿಯೋಜಿಸಿ ಕೇಂದ್ರ ಸರಕಾರ ಅನು ದಾನ ಬಿಡುಗಡೆ ಮಾಡಿದೆ.

ಕೇಂದ್ರದ ಸಂಯೋಜಕ ಹಾಗೂ ಸಹ ಪ್ರಾಧ್ಯಾಪಕ ಡಾ.ಅನೀಶ್‌ಕುಮಾರ್ ವಾರಿಯರ್ ತಂಡದ ಪ್ರಧಾನ ಸಂಶೋಧಕರಾ ಗಿದ್ದು, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಬಾಲಕೃಷ್ಣ ಅವರು ಯೋಜನೆಯ ಸಹ ಪ್ರಧಾನ ಸಂಶೋಧಕರಾಗಿರುವರು.

ಮೂರು ವರ್ಷಗಳ ಯೋಜನೆಯಲ್ಲಿ ಸಂಶೋಧನೆಗಾಗಿ ಕೇಂದ್ರ ಸರಕಾರದ ಭೂವಿಜ್ಞಾನ ಸಚಿವಾಲಯ ಹಾಗೂ ಹೈದರಾಬಾದಿನ ಭಾರತದ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ (ಐಎನ್‌ಸಿಓಐಎಸ್) ಒಟ್ಟು 93.15 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.

ಈ ಯೋಜನೆಯಲ್ಲಿ ಕರ್ನಾಟಕ ಕರಾವಳಿಯ ಅರಬಿಸಮುದ್ರದ ಸಂಭಾವ್ಯ ಮೀನು ದೊರೆಯುವ ಪ್ರದೇಶದ ನೀರಿನಲ್ಲಿ ಉಂಟಾಗುತ್ತಿರುವ ಸೂಕ್ಷ್ಮ ಭೂಜೈವಿಕ ಬದಲಾವಣೆ ಹಾಗೂ ಅದರಿಂದ ಮೀನಿನ ಲಭ್ಯತೆಯ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ.

ಅಲ್ಲದೇ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದ ಈ ಪ್ರದೇಶಗಳ ಮೀನಿನ ಇಳುವರಿ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಸಹ ಈ ತಂಡ ಸಂಶೋಧನೆಯನ್ನು ನಡೆಸಬೇಕಾಗಿದೆ. ಸಾಗರ ಮಾಲಿನ್ಯ ಮತ್ತು ಅದರ ತಡೆಗಟ್ಟುವಿಕೆ ವಿಷಯವೂ ತಂಡದ ಸಂಶೋಧನೆ ಯಲ್ಲಿ ಸೇರಿದೆ.

ಗೋವಾದಲ್ಲಿರುವ ರಾಷ್ಟ್ರೀಯ ಸಮುದ್ರವಿಜ್ಞಾನ ಸಂಸ್ಥೆ (ಎನ್‌ಐಓ)ಯ ವಿಜ್ಞಾನಿಗಳಾದ ಡಾ.ದಾಮೋದರ ಶೆಣೈ, ಡಾ.ಶಿಬಿ ಕುರಿಯನ್ ಹಾಗೂ ಡಾ.ಮಂದರ್ ನಾಂಜಕರ್ ಅವರನ್ನೊಳಗೊಂಡ ಮತ್ತೊಂದು ತಂಡವೂ ಯೋಜನೆಯಲ್ಲಿ ಎಂಐಟಿ ತಂಡದೊಂದಿಗೆ ಸೇರಿ ಕೆಲಸ ಮಾಡಲಿದೆ. ಡಾ.ಶೆಣೈ ನೇತೃತ್ವದ ತಂಡ ಹವಾಮಾನ ಬದಲಾವಣೆಯಿಂದ ಮೀನುಗಳ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಅಮೂಲ್ಯ ಮಾಹಿತಿಗಳನ್ನು ನೀಡುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News