×
Ad

ಬ್ರಹ್ಮಾವರ: ವಿಶಾಲ ಗಾಣಿಗ ಕೊಲೆ ಪ್ರಕರಣ; ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿಯ ಬಂಧನ

Update: 2024-02-03 15:34 IST

ಉಡುಪಿ, ಫೆ.3: ಮೂರು ವರ್ಷಗಳ ಹಿಂದೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಮಾಬುಕಳದ ಮಿಲನ ರೆಸಿಡೆನ್ಸಿ ಫ್ಲ್ಯಾಟ್‌ನಲ್ಲಿ ನಡೆದ ವಿಶಾಲ ಗಾಣಿಗ(35) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಉತ್ತರ ಪ್ರದೇಶದ ಲಕ್ನೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆ.2ರಂದು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಗೋರಖ್ ಪುರ ನಿವಾಸಿ ಧರ್ಮೇಂದ್ರ ಕುಮಾರ್ ಸುಹಾನಿ (40) ಬಂಧಿತ ಆರೋಪಿ. ಈ ಹಿಂದೆ ಪ್ರಕರಣದ ಆರೋಪಿಗಳಾದ ವಿಶಾಲ ಗಾಣಿಗರ ಪತಿ ರಾಮಕೃಷ್ಣ ಗಾಣಿಗ ಹಾಗೂ ಸುಪಾರಿ ಕಿಲ್ಲರ್‌ಗಳಾದ ಗೋರಖ್ ಪುರದ ಸ್ವಾಮಿನಾಥನ್ ನಿಶಾದ್ ಮತ್ತು ರೋಹಿತ್ ರಾಣಾ ಪ್ರತಾಪ್ ನಿಶಾದ್ ಅವರನ್ನು ಬಂಧಿಸಲಾಗಿತ್ತು.

ಧರ್ಮೇಂದ್ರ ಕುಮಾರ್, ಪ್ರಕರಣದ ಪ್ರಮುಖ ಆರೋಪಿ ರಾಮಕೃಷ್ಣ ಗಾಣಿಗ ಹಾಗೂ ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್‌ನಿಗೂ ಪರಿಚಯ ಮಾಡಿಸಿ ಕೊಲೆಗೆ ಸಹಕರಿಸಿದ್ದನು. ಈತನು ಪ್ರಕರಣ ದಾಖಲಾದ ವಿಚಾರ ತಿಳಿದು, 3 ವರ್ಷಗಳಿಂದ ದುಬೈಯಲ್ಲಿ ತಲೆಮರೆಸಿಕೊಂಡಿದ್ದನು.

ಧರ್ಮೇಂದ್ರ ಫೆ.2ರಂದು ದುಬೈಯಿಂದ ಲಕ್ನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಬರುತ್ತಿರುವ ಮಾಹಿತಿ ಪಡೆದ ಬ್ರಹ್ಮಾವರ ಠಾಣಾ ಎಸ್ಸೈ ಮಧು ಬಿ.ಇ. ಹಾಗೂ ಎಎಸೈ ಶಾಂತರಾಜ್, ಸಿಬ್ಬಂದಿ ಸುರೇಶ ಬಾಬು ತಂಡವು ವಿಮಾನ ನಿಲ್ದಾಣದಲ್ಲಿ ಆರೋಪಿ ಧರ್ಮೇಂದ್ರನನ್ನು ವಶಕ್ಕೆ ಪಡೆದುಕೊಂಡಿತು.

ಅಲ್ಲಿಂದ ಆರೋಪಿಯನ್ನು ಫೆ.3ರಂದು ಉಡುಪಿಗೆ ಕರೆ ತಂದ ತಂಡವು ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿತು. ಹೆಚ್ಚಿನ ತನಿಖೆಗಾಗಿ ಪೊಲೀಸರು ಆರೋಪಿಯನ್ನು ಸೋಮವಾರ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

2021ರ ಜು.12ರಂದು ಫ್ಲ್ಯಾಟ್‌ನಲ್ಲಿ ಒಬ್ಬಂಟಿಯಾಗಿದ್ದ ವಿಶಾಲ ಗಾಣಿಗರನ್ನು ಭೀಕರವಾಗಿ ಕೊಲೆ ಮಾಡಿ, ಚಿನ್ನಾಭರಣಗಳನ್ನು ಸುಲಿಗೆ ಮಾಡಲಾಗಿತ್ತು. ಪ್ರಕರಣವನ್ನು ಶೀಘ್ರವಾಗಿ ಪತ್ತೆ ಹಚ್ಚಿದ ಪೊಲೀಸರು, ತನ್ನ ಪತ್ನಿಯ ಕೊಲೆಗೆ ಸುಪಾರಿ ನೀಡಿದ್ದ ಸೂತ್ರದಾರ ಪತಿ ಹಾಗೂ ಸುಪಾರಿ ಕಿಲ್ಲರ್‌ಗಳನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News