×
Ad

ಕೊಡೇರಿಯಲ್ಲಿ ಬಂದರು ನಿರ್ಮಾಣ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2023-11-26 23:18 IST

ಬೆಂಗಳೂರು: ಎಡಮಾವಿನಹೊಳೆ ನದಿ ಪಾತ್ರದ ಕೊಡೇರಿ ಕಡಲ ಕಿನಾರೆ (ಬೀಚ್)ಯಲ್ಲಿ ಕಿರು ಮೀನುಗಾರಿಕಾ ಬಂದರು ನಿರ್ಮಾಣ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕೊಡೇರಿ ಬಂದರು ಮೀನುಗಾರರ ಸಹಕಾರಿ ಸಂಘದ ಪ್ರಕಾಶ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕರ್ನಾಟಕ ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರ, ಮೀನುಗಾರಿಕೆ ನಿರ್ದೇಶನಾಲಯದ ನಿರ್ದೇಶಕರು, ಬಂದರು ಮತ್ತು ಮೀನುಗಾರಿಕೆ ಉಡುಪಿ ವಿಭಾಗದ ಕಾರ್ಯಕಾರಿ ಎಂಜಿನಿಯರ್, ಅರಣ್ಯ ಇಲಾಖೆಯ ಪ್ರಧಾನ ವನ್ಯಜೀವಿ ಪಾಲಕರಿಗೆ ನೋಟಿಸ್ ಜಾರಿಗೊಳಿಸಿ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ, ವಿಚಾರಣೆ ಮುಂದೂಡಿತು.

ಕೊಡೇರಿ ಕಡಲ ಕಿನಾರೆಯ ಕಿರು ಮೀನುಗಾರಿಕಾ ಬಂದರು, ಸಮುದ್ರ ಹಾಗೂ ಎಡಮಾವಿನಹೊಳೆ ನದಿಯ 50 ಮೀಟರ್ ಅಂತರದಲ್ಲಿದೆ. ಇಲ್ಲಿ ಕಿರು ಮೀನುಗಾರಿಕಾ ಬಂದರು ನಿರ್ಮಾಣ ಮಾಡುವುದು ಕರಾವಳಿ ನಿಯಂತ್ರಣ ವಲಯ  ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಪ್ರದೇಶ ಸಿಆರ್‍ಜೆಡ್ ವಲಯ-1ರ ವ್ಯಾಪ್ತಿಗೆ ಬರಲಿದ್ದು, ಈ ಪ್ರದೇಶದಲ್ಲಿ ಸೇವೆ ಮತ್ತು ರಕ್ಷಣಾ ಕಾರ್ಯಾಚರಣೆ ಹೊರತುಪಡಿಸಿ ಬೇರೆ ಚಟುವಟಿಕೆ ನಡೆಸುವಂತಿಲ್ಲ. ಕಡಲ ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದ ಹೊರತು ಈ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತಿಲ್ಲ. ಬಂದರು ನಿರ್ಮಾಣದಿಂದ ಕಿರಿಮಂಜೇಶ್ವರ ಗ್ರಾಮದ ಕುಡಿಯುವ ನೀರು ಕಲುಷಿತಗೊಳ್ಳಲಾಗಿದ್ದು, 10 ಸಾವಿರ ಜನಸಂಖ್ಯೆಗೆ ಸಮಸ್ಯೆ ಎದುರಾಗಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News