ಸಂಸ್ಕಾರಯುತ ವಿದ್ಯಾರ್ಥಿಗಳ ನಿರ್ಮಾಣ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶವಾಗಬೇಕು : ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ
ಕಾರ್ಕಳ: ದೇವಸ್ಥಾನಗಳನ್ನು ಕಟ್ಟಿ ಎತ್ತರಕ್ಕೆ ಏರಿಸಿ ಬೆಳೆಸುವುದು ಸುಲಭ ಆದರೆ ಮಕ್ಕಳನ್ನು ಕಲಿಸಿ ಬೆಳೆಸಿ ಸುಸಂಸ್ಕೃತರನ್ನಾಗಿಸುವುದು ಬಹಳ ಕಷ್ಟ. ಮಕ್ಕಳ ಬೆಳವಣಿಗೆಯಲ್ಲಿ ತಂದೆ-ತಾಯಿಯರ ಪಾತ್ರ ಅನನ್ಯ ಹಾಗೂ ಅತ್ಯಮೂಲ್ಯ. ಮಕ್ಕಳಿಗೆ ಕಲಿಕೆಯೊಂದಿಗೆ ಲೌಕಿಕ ಹಾಗೂ ಧಾರ್ಮಿಕ ಜ್ಞಾನವನ್ನು ನೀಡುವ ಮೂಲಕ ಸಮಾಜದ ಹಾಗೂ ದೇಶದ ಆಸ್ತಿಗಳಾಗಿ ವಿದ್ಯಾರ್ಥಿಗಳನ್ನು ನಿರ್ಮಾಣಗೊಳಿಸುವುದು ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶವಾಗಬೇಕು ಎಂದು ಕಾರ್ಕಳ ಧಾನಶಾಲೆ ಜೈನ ಮಠದ ಸ್ವಸ್ತಿಶ್ರೀ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಕರೆ ನೀಡಿದರು.
ಅವರು ಕಾರ್ಕಳ ತಾಲೂಕಿನ ಸಾಣೂರು ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಪಿಯು ಕಾಲೇಜಿನ ಶಾಲಾ ವಾರ್ಷಿಕೋತ್ಸವ ಮತ್ತು ಡಾ. ಜೀವರಾಜ್ ಆಳ್ವ ವಿದ್ಯಾರ್ಥಿನಿಲಯದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಅಖಿಲ ಕರ್ನಾಟಕ ಮಕ್ಕಳ ಕೂಟ, ಬೆಂಗಳೂರು ಅಧ್ಯಕ್ಷ ಕೆ. ಮೋಹನ್ ದೇವ್ ಆಳ್ವ ಮಾತನಾಡಿ, ಜೀವನದಲ್ಲಿ ಮನುಷ್ಯನಿಗೆ ಶಿಸ್ತು, ಸಂಯಮ, ಆರ್ಥಿಕ ಶಿಸ್ತು, ಪ್ರಾಮಾಣಿಕತೆ ಜೊತೆಯಲ್ಲಿ ಪಾರದರ್ಶಕತೆ ಇರಬೇಕು. ಆಗ ಮಾತ್ರ ಸಂಸ್ಥೆ ಹಾಗೂ ಮನುಷ್ಯ ಬೆಳೆಯಲು ಸಾಧ್ಯ ಎಂದ ಅವರು, ಸಂಸ್ಥೆಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದರು.
ವಿದ್ವಾನ್ ಕುಮಾರಗುರು ತಂತ್ರಿ ಕೊರಂಗ್ರಪಾಡಿ, ಅಜೆಕಾರ್ ಪದ್ಮ ಗೋಪಾಲ್ ಚಾರಿಟೇಬಲ್ ಟ್ರಸ್ಟ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸಂದರ್ಭೋಚಿತವಾಗಿ ಮಾತನಾಡಿದರು.
ರಾಜೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದರು.
ವೇದಿಕೆಯಲ್ಲಿ ಶೈಲಜಾ ಮೋಹನ್ ದೇವ್ ಆಳ್ವ, ಜಯಶ್ರೀ ಅಮರ್ನಾಥ್ ಶೆಟ್ಟಿ, ರಾಜೇಶ್ವರಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಶ್ವೇತಾ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಡಾ. ರಶ್ಮಿ ಕೆ. ಸ್ವಾಗತಿಸಿ, ಪ್ರಣವ್ ಭಟ್ ವಂದಿಸಿದರು. ಶ್ರೀಲಕ್ಷ್ಮಿ ಪ್ರಾರ್ಥಿಸಿ, ಪದ್ಮನಾಭ ಹೆಗಡೆ ಸಾಮೂಹಿಕ ಶ್ಲೋಕ ಪಠಿಸಿದರು. ಉಷಾ ಅಂಬರೀಷ್ ಕಾರ್ಯಕ್ರಮ ನಿರೂಪಿಸಿದರು.