×
Ad

ದಲಿತ ಯುವಕನ ಶೂಟೌಟ್ ಪ್ರಕರಣ| ಬೇರೆ ಆಯಾಮದಲ್ಲಿ ತನಿಖೆ: ಎಸ್ಪಿ ಹರಿರಾಮ್ ಶಂಕರ್

ಉಡುಪಿ ಜಿಲ್ಲಾ ಮಟ್ಟದ ಎಸ್ಸಿ-ಎಸ್ಟಿ ಕುಂದುಕೊರೆತೆ ಸಭೆ

Update: 2025-09-20 22:26 IST

ಉಡುಪಿ, ಸೆ.20: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹನೇಹಳ್ಳಿ ಗ್ರಾಮದ ಬಾಳೆಹಿತ್ಲು ಮೂಡುತೋಟದಲ್ಲಿ ನಡೆದ ದಲಿತ ಕೂಲಿ ಕಾರ್ಮಿಕ ಕೃಷ್ಣ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ಬಗ್ಗೆ ಈಗಾಗಲೇ ಪ್ರಾಮಾಣಿಕ ತನಿಖೆ ನಡೆದಿದ್ದು, ಈವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಆದುದರಿಂದ ಬೇರೆ ಬೇರೆ ಆಯಾಮಗಳಲ್ಲಿ ಈ ಕುರಿತು ತನಿಖೆ ನಡೆಸಿ ಆರೋಪಿಗಳ ಪತ್ತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರೆತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಸಮತಾ ಸೈನಿಕ ದಳದ ಮುಖಂಡ ವಿಶ್ವನಾಥ ಪೇತ್ರಿ, ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ವಿಫಲವಾಗಿರುವುದರಿಂದ ಸಿಓಡಿ ತನಿಖೆಗೆ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿ ದ್ದೇವೆ. ಈ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಈ ಪ್ರಕರಣದ ಮೊದಲನೇ ಹಂತದ ತನಿಖೆ ಆಗಿದೆ. ಅದರಲ್ಲಿ 700 ಮಂದಿಯನ್ನು ವಿಚಾರಣೆಗೆ ಒಳಪಡಿಸ ಲಾಗಿತ್ತು. ತಾಂತ್ರಿಕವಾಗಿಯೂ ಪರಿಶೀಲನೆ ನಡೆಸಲಾಗಿತ್ತು. ಮುಂಬೈ ಹಾಗೂ ಕೇರಳಕ್ಕೂ ತನಿಖಾ ತಂಡ ತೆರಳಿ ಪರಿಶೀಲನೆ ನಡೆಸಿತ್ತು. ಈ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ನಡೆಸಲಾಗಿತ್ತು ಎಂದರು.

ನಾನು ಬಂದ ಬಳಿಕ ನಾಲ್ಕು ಬಾರಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭ ಈ ಪ್ರಕರಣದ ಬಗ್ಗೆ ವಿಚಾರಿಸಿದ್ದೆ. ಅಲ್ಲದೆ ಕೆಲವು ದಿನಗಳ ಹಿಂದೆ ಘಟನಾ ಸ್ಥಳಕ್ಕೂ ಭೇಟಿ ನೀಡಿದ್ದೇನೆ. ಇದೀಗ ನಾವು ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ, ಭೂ ವಿವಾದ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಎಸ್ಪಿ ತಿಳಿಸಿದರು.

ದೇವಸ್ಥಾನದಲ್ಲಿ ಉದ್ಯೋಗ ಇಲ್ಲ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ನಕಲಿ ಪ್ರಮಾಣ ಪತ್ರವನ್ನು ತಯಾರಿಸಿ 6.5 ಎಕರೆ ದಲಿತರ ಜಾಗವನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲಾಗಿದೆ. ಈ ಬಗ್ಗೆ ಯಾವುದೇ ಕ್ರಮ ಜರಗಿಸಿಲ್ಲ ಎಂದು ದಲಿತ ಮುಖಂಡ ರಮೇಶ್ ಕೋಟ್ಯಾನ್ ದೂರಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.

ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ದಲಿತರಿಗೆ ಮೀಸಲಾಗಿರುವ ಉದ್ಯೋಗವನ್ನು ದಲಿತರಿಗೆ ನೀಡುತ್ತಿಲ್ಲ. ಈ ಮೂಲಕ ದಲಿತರ ಉದ್ಯೋಗವನ್ನು ಕಸಿದುಕೊಳ್ಳಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಜರಗಿಸುತ್ತಿಲ್ಲ ಎಂದು ರಮೇಶ್ ಕೋಟ್ಯಾನ್ ಹಾಗೂ ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯೂರು ದೂರಿದರು.

ಮಂಗಳೂರಿನಿಂದ ಕಾರ್ಯಾಚರಿಸುವ ಫೈನಾನ್ಸ್ ಅಮಾಯಕರಿಗೆ 26ಸಾವಿರ ರೂ. ಸಾಲ ನೀಡಿ ಲಕ್ಷಾಂತರ ರೂ. ವಸೂಲಿ ಮಾಡುತ್ತಿದೆ. ಅವರ ಆಧಾರ್ ಕಾರ್ಡ್, ಸಹಿ ಪಡಿದು ಈ ರೀತಿ ವಂಚನೆ ಮಾಡುತ್ತಿದೆ. ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ದಲಿತ ಮುಖಂಡ ಶಿವಾನಂದ ಮೂಡಬೆಟ್ಟು ಆಗ್ರಹಿಸಿದರು.

ಗಾಂಧಿ ಭವನ ಅಭಿವೃದ್ಧಿ: ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಬನ್ನಂಜೆಯಲ್ಲಿ ರುವ ಪಾಲು ಬಿದ್ದ ಗಾಂಧಿ ಭವನವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸದೇ ದಲಿತರಿಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಮೊದಲು ಇಲ್ಲಿ ನಾವು ಪೊಲೀಸ್ ಕ್ಯಾಂಟಿನ್ ನಿರ್ಮಿಸಲು ತೀರ್ಮಾನಿಸಿದ್ದೇವು. ಇದೀಗ ಅದನ್ನು ಕೈ ಬಿಡಲಾಗಿದೆ. ಮುಂದೆ ಸಮಾಜ ಕಲ್ಯಾಣ ಇಲಾಖೆಯವರು ಹೊಸ ಕಟ್ಟಡ ನಿರ್ಮಿಸಿ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ಮಾಡುವ ಉದ್ದೇಶ ಇದೆ. ಈ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಬ್ರಹ್ಮಾವರ ಮಹೇಶ್ ಆಸ್ಪತ್ರೆಯ ಎದುರಿನ ರಾಷ್ಟ್ರೀಯ ಹೆದ್ದಾರಿ ದಾಟಲು ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿರುವುದರಿಂದ ಬೆಳಗ್ಗಿನ ಅವಧಿಯಲ್ಲಿ ಆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್ ರಾಜ್ ಬಿರ್ತಿ ಒತ್ತಾಯಿಸಿದರು.

ದಸಂಸ ಮುಖಂಡರಾದ ಉದಯ ಕುಮಾರ್ ತಲ್ಲೂರು, ವಿಜಯಲಕ್ಷ್ಮೀ ವಾಸುದೇವ ಮುದೂರು, ಯುವರಾಜ್, ಗಣೇಶ್ ನೆರ್ಗಿ ಮೊದಲಾದವರು ತಮ್ಮ ಅಹವಾಲುಗಳನ್ನು ಸಭೆಯಲ್ಲಿ ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಹವಾಲುಗಳನ್ನು ಆಲಿಸಲಾಯಿತು. ಸುಮಾರು 98 ಜನ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ್, ಕಾರ್ಕಳ ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News