×
Ad

ಬಿ.ಎಲ್.ಸಂತೋಷ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣ: ಮಹೇಶ್ ತಿಮರೋಡಿಗೆ ಷರತ್ತುಬದ್ದ ಜಾಮೀನು ಮಂಜೂರು

► ಆರೋಪಿ ಕೋರ್ಟ್‌ಗೆ ಹಾಜರು ► ಮೂರು ಗಂಟೆ ಪೊಲೀಸ್ ಕಸ್ಟಡಿಗೆ

Update: 2025-08-23 20:49 IST

ಉಡುಪಿ, ಆ.23: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಗ್ಗೆ ಅವಹೇಳನ ಕಾರಿ ಹೇಳಿಕೆ ನೀಡಿದ್ದ ಪ್ರಕರಣದ ಆರೋಪಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಶನಿವಾರ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ಆರೋಪಿಗೆ ಜಾಮೀನು ನೀಡುವಂತೆ ಕೋರಿ ಆರೋಪಿ ಪರ ವಕೀಲ ವಿಜಯ್ ವಾಸು ಪೂಜಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಆಕ್ಷೇಪಣೆ ಸಲ್ಲಿಸಿದ್ದರು. ವಿಜಯ್ ವಾಸು ಪೂಜಾರಿ ವಾದ ಮಂಡಿಸಿ, ಕಕ್ಷಿದಾರ ತಿಮರೋಡಿ ಅವರ ಬಂಧನದಲ್ಲಿ ಪೊಲೀಸರು ಸರಿಯಾಗಿ ಕಾನೂನು ಪಾಲಿ ಸಿಲ್ಲ. ಇವರ ವಿಡಿಯೋದಿಂದ ರಾಜ್ಯದಲ್ಲಿ ಎಲ್ಲೂ ಶಾಂತಿಭಂಗ ಆಗಿಲ್ಲ ಹಾಗೂ ಕಕ್ಷಿದಾರ ಹಿಂದು ಮುಖಂಡರ ವಿರುದ್ಧ ಮಾತನಾಡಿದ್ದೆಯೇ ಹೊರತು ಅನ್ಯಧರ್ಮ ದವರ ಪರವಾಗಿ ಅಲ್ಲ ಎಂದು ವಾದಿಸಿದರು.

ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ನಾಗೇಶ್ ಎನ್.ಎ. ಆರೋಪಿ ಪರ ವಕೀಲರ ವಾದವನ್ನು ಪುರಸ್ಕ ರಿಸಿ ತಿಮರೋಡಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ನೀಡಿದರು. ಈ ವೇಳೆ ನ್ಯಾಯಾಧೀಶರು, ಆರೋಪಿಗೆ ಇನ್ನು ಮುಂದೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸದಂತೆ ಸೂಚನೆ ನೀಡಿದರು. ಬಳಿಕ ಪೊಲೀಸರು ಬಿಗಿ ಪೊಲೀಸ್ ಭದ್ರತೆಯಲ್ಲಿ ತಿಮರೋಡಿ ಅವರನ್ನು ಹಿರಿಯಡ್ಕ ಜೈಲಿಗೆ ಕರೆದೊಯ್ದು, ಅಲ್ಲಿ ಕಾನೂನು ಪಕ್ರಿಯೆ ಮುಗಿಸಿ ರಾತ್ರಿ ವೇಳೆ ಬಿಡುಗಡೆ ಮಾಡಲಾಯಿತು.

3 ಗಂಟೆ ಪೊಲೀಸ್ ಕಸ್ಟಡಿಗೆ: ಪ್ರಕರಣದ ತನಿಖಾಧಿಕಾರಿ, ಬ್ರಹ್ಮಾವರ ಪೊಲೀಸ್ ಠಾಣೆಯ ಎಸ್ಸೈ ಅಶೋಕ್ ಮಾಲಭಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು.

ಇದಕ್ಕೆ ಆರೋಪಿ ಪರ ವಕೀಲರ ಆಕ್ಷೇಪಣೆ ಸಲ್ಲಿಸಿದರು. ಬಳಿಕ ನ್ಯಾಯಾ ಧೀಶರು, ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಯನ್ನು ಒಂದು ಗಂಟೆ ಅವಧಿಯೊಳಗೆ ನ್ಯಾಯಾಲಯ ಹಾಜರುಪಡಿಸು ವಂತೆ ಸೂಚಿಸಿದರು. ಅದರಂತೆ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಎಸ್ಸೈ ಅಶೋಕ್ ಮಾಲಭಾಗಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಭದ್ರತೆಯೊಂದಿಗೆ ಮಧ್ಯಾಹ್ನ ಸುಮಾರು 1.30ಕ್ಕೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಈ ವೇಳೆ ನ್ಯಾಯಾಧೀಶರು ಮೂರು ಗಂಟೆಗಳ ಕಾಲ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಆಗ ಎಸ್ಸೈ, ಮಹಜರು ಪ್ರಕ್ರಿಯೆಗೆ ಇನ್ನಷ್ಟು ಸಮಯಾವಕಾಶ ಕೇಳಿದರು. ಅದಕ್ಕೆ ನ್ಯಾಯಾಧೀಶರು, ಬಂಧನದ ದಿನವೇ ಯಾಕೆ ಪೋಲಿಸ್ ಕಸ್ಟಡಿಗೆ ಕೇಳಿಲ್ಲ ಎಂದು ಎಸ್ಸೈ ಅವರನ್ನು ತರಾಟೆಗೆ ತೆಗೆದುಕೊಂಡು. ಸಂಜೆ 4.40ರವರೆಗೆ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.

ನಂತರ ಪೋಲಿಸರು ಅವರನ್ನು ಉಡುಪಿ ನಗರಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸಿ, ಮಹಜರು ಪ್ರಕ್ರಿಯೆ ನಡೆಸಿದರು. ವಿಚಾರಣೆಯ ಬಳಿಕ ಮತ್ತೆ ಸಂಜೆ 4.30ರ ಸುಮಾರಿಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಲಾಯಿತು.

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಕೂತುಹಲಿಗರು ಹಾಗು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು.  

ದೂರುದಾರ ಪರವಾಗಿ ವಕಲಾತ್ತು: ಚರ್ಚೆ

ಬೆಳಗ್ಗೆ ನಡೆದ ಕಲಾಪದಲ್ಲಿ ಪ್ರಕರಣದ ದೂರುದಾರ ರಾಜೀವ್ ಕುಲಾಲ್ ಪರವಾಗಿ ಅಭಿಯೋಜನೆಗೆ ಸಹಕರಿಸಲು ಅವಕಾಶ ಕಲ್ಪಿಸುವಂತೆ ಮಂಗಳೂರಿನ ಹಿರಿಯ ನ್ಯಾಯವಾದಿ ಶಂಭು ಶರ್ಮ ವಕಾಲತ್ತು ಸಲ್ಲಿಸಿದರು. ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು.

ಈ ಕುರಿತು ಸಾಕಷ್ಟು ಚರ್ಚೆಗಳು ನಡೆದವು. ಇದಕ್ಕೆ ನ್ಯಾಯಧೀಶರು ಈ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯ ಬೇಕಾಗಿದ್ದು, ಮುಂದಿನ ದಿನಗಳಲ್ಲಿ ಅದರ ಬಗ್ಗೆ ಚರ್ಚಿಸಲಾಗುವುದು ಎಂದರು. ಆಗ ವಕೀಲರು ಈ ವಕಾಲತ್ತಿನ ಬಗ್ಗೆ ಅಂತಿಮಗೊಳ್ಳುವವರೆಗೆ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಯನ್ನು ನಡೆಸಬಾರದು ಎಂದು ಕೋರಿದರು. ಆದರೆ ನ್ಯಾಯಾಧೀಶರು ಇವರ ವಕಲಾತ್ತನ್ನು ಪರಿಗಣಿಸಲಿಲ್ಲ ಎಂದು ತಿಳಿದುಬಂದಿದೆ.

‘ಇಡೀ ಜಿಲ್ಲೆಯ ಎಲ್ಲ ವಕೀಲರು ದೇವತ ರೂಪದಲ್ಲಿ ಬಂದು ನಿಂತು ನನಗೆ ಜಾಮೀನು ದೊರಕಿಸಿಕೊಟ್ಟಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಹೋರಾಟ ಇದೇ ರೀತಿ ನಡೆಯುತ್ತದೆ. ಅನಾಮಿಕನ ಬಂಧನದ ಬಗ್ಗೆ ನನಗೆ ಏನು ಗೊತ್ತಿಲ್ಲ. ಸುಜಾತ ಭಟ್ ನಮ್ಮನ್ನು ದಿಕ್ಕು ತಪ್ಪಿಸಿಲ್ಲ. ನಮ್ಮ ಹೋರಾಟದಲ್ಲಿ ಅವರು ಇಲ್ಲ. ಅವರಿಗೆ ಅನ್ಯಾಯವಾಗಿರುವುದಕ್ಕೆ ಬಂದಿದ್ದಾರೆ’

-ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ಪರ ಹೋರಾಟಗಾರ

‘ತಿಮರೋಡಿ ಅವರಿಗೆ ಜಾಮೀನು ಸಿಕ್ಕಿರುವುದು ನಮ್ಮ ಹೋರಾಟದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಅದಕ್ಕಾಗಿ ಶ್ರಮಿಸಿದ ಉಡುಪಿ ಜಿಲ್ಲೆಯ ವಕೀಲರ ಬಾಂಧವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರೆಲ್ಲ ನಮ್ಮ ಬೆಂಬಲಕ್ಕೆ ಬಂಡೆಯಂತೆ ನಿಂತಿದ್ದಾರೆ’

-ಗಿರೀಶ್ ಮಟ್ಟಣ್ಣನವರ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News