×
Ad

ತಳಜಾತಿಗಳ ಎದೆಯೊಳಗೆ ಸ್ವಾಭಿಮಾನವನ್ನು ಬಿತ್ತಿದ ದೇವರಾಜ ಅರಸರು: ಪ್ರೊ.ಜಯಪ್ರಕಾಶ್ ಶೆಟ್ಟಿ

Update: 2023-08-20 21:29 IST

ಉಡುಪಿ: ಒಕ್ಕಲು ಮಸೂದೆ, ಮೀಸಲಾತಿ, ಜೀತ ಮುಕ್ತಿ, ಮಲ ಹೊರುವುದರ ನಿಷೇಧ, ಋಣ ಮುಕ್ತಿಯೇ ಮೊದಲಾದ ಜೀವ ಪರ ಶಾಸನಗಳ ಮೂಲಕ ದಲಿತ, ದಮನಿತ ಹಾಗೂ ಹಿಂದುಳಿದ ವರ್ಗಗಳಿಗೆ ಬಿಡುಗಡೆ ಕೊಟ್ಟ ದೇವರಾಜ ಅರಸರು, ವಿದ್ಯಾರ್ಥಿನಿಲಯ ಮತ್ತು ವಸತಿ ಶಾಲೆಗಳನ್ನು ತೆರೆದು ತಳಜಾತಿಗಳಿಗೆ ಹಾಗೂ ಹೆಣ್ಣುಮಕ್ಕಳಿಗೆ ಶಿಕ್ಷಣದ ಹೊಸಬೆಳಕನ್ನು ಕಾಣಿಸಿದರು ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಜಯ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.

ದೇವರಾಜ ಅರಸರ 108ನೇ ಜನ್ಮ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ತಬ್ಬಲಿ ಜಾತಿಗಳಿಗೆ ರಾಜಕೀಯ ಅಧಿಕಾರದ ಹೆಬ್ಬಾಗಿಲನ್ನು ತೆರೆದು ಕರ್ನಾಟಕದ ರಾಜಕಾರಣದಲ್ಲಿ ಹಿಂದೆಂದೂ ಕಾಣದ ಸಾಮಾಜಿಕ ಕ್ರಾಂತಿಯ ಹೆಗ್ಗುರುತನ್ನು ಸಾಧಿಸಿದ ದೇವರಾಜ ಅರಸರು, ಹೇಳ ಹೆಸರಿಲ್ಲದ ತಳಜಾತಿಗಳ ಎದೆಯೊಳಗೆ ಸ್ವಾಭಿಮಾನವನ್ನು ಬಿತ್ತಿದವರು. ಮಾತ್ರವಲ್ಲ ಆಧುನಿಕ ಕರ್ಣಾಟಕಕ್ಕೆ ನಿಜವಾದ ಅರ್ಥದ ಮುಂಚಲನೆಯನ್ನು ಒದಗಿಸಿದ ಧೀಮಂತ ಜನನಾಯಕರು ಎಂದರು.

ದೇವರಾಜ ಅರಸರ ಸಾಮಾಜಿಕ ಕಾಳಜಿಯ ಕಾರ‌್ಯಕ್ರಮಗಳಿಂದ ಬೆಚ್ಚಿಬಿದ್ದ ಪಟ್ಟಭದ್ರ ಹಿತಾಸಕಿತಿಗಳು ನಕಾರಾತ್ಮಕ ಪ್ರಚಾರದ ಮೂಲಕ ಅವರ ನೈತಿಕ ಸ್ಥೈರ‌್ಯವನ್ನು ಕುಗ್ಗಿಸುವ ಯತ್ನ ಮಾಡಿದರಾದರೂ, ಎದೆಗುಂದದ ಅರಸರು ತಾವೇ ಹೇಳಿಕೊಂಡಂತೆ ಬೇಡನೊಬ್ಬನ ಕೈಯಲ್ಲಿ ಹೊಸದೊಂದು ರಾಮಾಯಣ ಬರೆಸಿದರು. ಅಲ್ಲದೆ ಎಲ್.ಜಿ.ಹಾವನೂರರ ಮೂಲಕ ಬರೆಸಿದ ಆ ಹೊಸ ರಾಮಾಯಣದ ಫಲಶ್ರುತಿಯಾದ ಮೀಸಲಾತಿಯನ್ನೂ ಜಾರಿಗೆ ತಂದು ಆಧುನಿಕ ಕರ್ಣಾಟಕ ಹಾಗೂ ಭಾರತದ ರಾಜಕಾರಣವನ್ನು ಈಗಲೂ ಪ್ರಭಾವಿ ಸುತ್ತಿರುವ ವಾಸ್ತವವನ್ನು ನಮ್ಮೆದುರು ಉಳಿಸಿ ಹೋಗಿರುವುದ ರಲ್ಲೇ ಅವರ ರಾಜಕೀಯ ದೂರದೃಷ್ಟಿಯ ಸಾಕ್ಷಿ ಇದೆ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸುರೇಶ್ ರೈ ವಹಿಸಿದ್ದರು. ಕನ್ನಡ ಸಹಾಯಕ ಪ್ರಾಧ್ಯಾಪಕಿ ರತ್ನಮಾಲಾ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಅರ್ಚನಾ ವಂದಿಸಿದರು. ಶಾಲಿನಿ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News