×
Ad

ಉಪ್ಪುನೀರು ತಡೆಗೆ ತುರ್ತು ಕಾಮಗಾರಿ: ಶಾಸಕ ಗುರ್ಮೆ ಆಗ್ರಹ

Update: 2025-08-12 20:26 IST

ಉಡುಪಿ, ಆ.12: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 26 ಕಿ.ಮೀ. ಉದ್ದದ ಸಮುದ್ರ ತೀರ ಇದ್ದು, ಪ್ರಮುಖ ನದಿಗಳಾದ ಶಾಂಭವಿ, ಕಾಮಿನಿ, ಪಿನಾಕಿನಿ, ಪಾಪನಾಶಿನಿ ನದಿಗಳು ಉಬ್ಬರದ ಸಂದರ್ಭದಲ್ಲಿ ಹಿಮ್ಮುಖವಾಗಿ ಹರಿಯುವುದರಿಂದ ತೋಟಗಳಿಗೆ ಹಾಗೂ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿ ಬೆಳೆ ಹಾನಿ ಉಂಟಾಗುತ್ತಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ವಿಧಾನಸಭೆಯಲ್ಲಿ ಸದನದ ಗಮನ ಸೆಳೆದರು.

ಇದರಿಂದ ವಿಶೇಷವಾಗಿ ಮಟ್ಟು ಭಾಗದಲ್ಲಿ ಬೆಳೆಯುತ್ತಿರುವ ಎಐ ಟ್ಯಾಗ್ ಹೊಂದಿರುವ ಮಟ್ಟುಗುಳ್ಳ (ಬದನೆಕಾಯಿ) ಬೆಳೆಗೆ ಉಪ್ಪು ನೀರಿನ ಹರಿವಿನಿಂದ ಸಮಸ್ಯೆ ಇದ್ದು ಈ ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯ ಖಾರ್ಲ್ಯಾಂಡ್ ಯೋಜನೆಯಡಿ ಉಪ್ಪು ನೀರು ತಡೆಗಟ್ಟಲು ತುರ್ತು ಕಾಮಗಾರಿ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ಅಲ್ಲದೇ ಕಾಪು ಭಾಗದ ಇನ್ನಿತರ ಪ್ರದೇಶಗಳಲ್ಲಿ ನದಿ ದಂಡೆಗಳ ಕೊರತೆದಿಂದ ಕೃಷಿ ಬೆಳೆಗಳಿಗೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ವಾಸ್ತವ್ಯದ ಮನೆಗಳಿಗೆ ಹೆಚ್ಚಿನ ಹಾನಿ ಉಂಟಾಗುತ್ತಿದ್ದು ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಅನುದಾನ ನೀಡುವಂತೆ ಸದನದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಸಣ್ಣ ನೀರಾವರಿ ಇಲಾಖಾ ಸಚಿವರಿಗೆ ಮನವಿ ಮಾಡಿದರು. ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ಮರಳು, ಕೆಂಪುಕಲ್ಲು ಸಮಸ್ಯೆ ಚರ್ಚೆ: ರಾಜ್ಯ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲೆಯಲ್ಲಿರುವ ಗಣಿ ಇಲಾಖೆಯ ಸಮಸ್ಯೆಗಳ ಬಗ್ಗೆ ಇಂದು ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ106ರಲ್ಲಿ ನಡೆದ ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಉಡುಪಿ ಜಿಲ್ಲೆಯ ಶಾಸಕರು ಭಾಗವಹಿಸಿದರು. ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಕೆಂಪು ಕಲ್ಲು ಹಾಗೂ ಮರಳು ಗಣಿಗಾರಿಕೆ ಸಮಸ್ಯೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.

ಕಾಪು: ಸವಲತ್ತು ವಿತರಣೆ: 2024-25ನೇ ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಹಾಗೂ ವೃತ್ತಿಪರ ಕುಶಲ ಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಗೆ ಗರಿಷ್ಠ 8000ರೂ.ವರೆಗೆ ಉಚಿತ ಸುಧಾರಿತ ಉಪಕರಣಗಳು ಕಾಪು ಕ್ಷೇತ್ರದ 67 ಫಲಾನುಭವಿಗಳಿಗೆ ಮಂಜೂರಾಗಿದ್ದು ಕಾಪು ಶಾಸಕರ ಕಚೇರಿಯಲ್ಲಿ ಸೋಮವಾರ ಸಾಂಕೇತಿಕವಾಗಿ 9ಮಂದಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News