×
Ad

ಗೋಪಾಡಿ ಗ್ರಾಮಪಂಚಾಯತ್ ಗ್ರಾಮಸಭೆ: ಪಡುಚಾವಡಿಬೆಟ್ಟು ಅಂಬೇಡ್ಕರ್ ಭವನದ ಬಗ್ಗೆ ಅಸಮಾಧಾನ

Update: 2023-09-16 21:06 IST

ಕುಂದಾಪುರ, ಸೆ.16: ಗೋಪಾಡಿ ಗ್ರಾಪಂ ಸಭಾಂಗಣದಲ್ಲಿ ಶನಿವಾರ ನಡೆದ 2023-24ನೇ ಸಾಲಿನ ಗೋಪಾಡಿ ಗ್ರಾಪಂ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ದಸಂಸ ಮುಖಂಡರು, ಗೋಪಾಡಿ ಪಡುಚಾವಡಿಬೆಟ್ಟುವಿನ ಅಂಬೇಡ್ಕರ್ ಭವನ ವಿಚಾರ ಪ್ರಸ್ತಾಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ದಸಂಸ ಮುಖಂಡ ರಾಜು ಬೆಟ್ಟಿನಮನೆ ಮಾತನಾಡಿ, ಜಿಲ್ಲೆಯಲ್ಲಿ 7-8 ಸೆಂಟ್ಸ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾದ ಉದಾ ಹರಣೆಗಳಿಲ್ಲ. ಯಾವುದೋ ದುರುದ್ದೇಶಕ್ಕೆ ಆ ಸ್ಥಳದಲ್ಲಿ ಭವನ ನಿರ್ಮಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಒಂದೇ ಮನೆಗಾಗಿ ರಸ್ತೆ ನಿರ್ಮಿಸಲಾಗಿದೆ. ಈ ಬಗ್ಗೆ ಸೂಕ್ಗ ತನಿಖೆಗೆ ಆದೇಶಿಸಲಾಗಿದೆ. ಈ ಹಿಂದಿನ ಗ್ರಾಮ ಸಭೆಯಲ್ಲೂ ಪ್ರಸ್ತಾಪಿಸ ಲಾಗಿದೆ. ಎಸ್ಸಿ-ಎಸ್ಟಿ ಅನುದಾನ ದುರ್ಬಳಕೆಯಾಗುವುದಕ್ಕೆ ಇದೆಲ್ಲಾ ಜ್ವಲಂತ ಸಾಕ್ಷಿ ಎಂದು ಆರೋಪಿಸಿದರು.

ಕುಂದಾಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮೂಲಸೌಕರ್ಯ ವಿಚಾರದ ಬಗ್ಗೆ ವರದಿಯಾಗಿದ್ದು ಸ್ಥಳ ಪರಿಶೀಲನೆ ಮಾಡಲಾಗಿದೆ. ಸರಿಯಾದ ನಿರ್ವಹಣೆಯಾಗಿಲ್ಲ, ಭವನ ಉಪಯೋಗವಾಗಿಲ್ಲ ಎಂದರು.

ಸ್ಥಳೀಯರ ವಿರೋಧ ಹಿನ್ನೆಲೆ ಭವನಕ್ಕೆ ಗ್ರಾ.ಪಂ.ನ ಶೇ.25 ನಿಧಿಯಿಂದ ಹಣ ಬಿಡುಗಡೆ ಮಾಡಿಲ್ಲ ಎಂದು ಪಿಡಿಒ ಹೇಳಿದ್ದಾರೆ. ಶೀಘ್ರವೇ ಸಮಿತಿ ಸಭೆ ಕರೆದು ಎಲ್ಲರಲ್ಲೂ ಒಮ್ಮತ ಮೂಡಿಸಿ ಅಂಬೇಡ್ಕರ್ ಭವನ ಸದ್ಬಳಕೆಯಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

ಜವಬ್ದಾರಿಯುತ ಇಲಾಖೆಯಾಗಿರುವ ಮೆಸ್ಕಾಂ ತುರ್ತು ಪರಿಸ್ಥಿತಿ ನಿಭಾಯಿಸುವಲ್ಲಿ ಮುಂಚೂಣಿ ಕೆಲಸ ಮಾಡಬೇಕು. ನಿಧಾನಗತಿ ಕೆಲಸದಿಂದ ಒಂದೊಮ್ಮೆ ಅನಾಹುತ ಸಂಭವಿಸಿದರೆ ಹೊಣೆ ಯಾರು?. ಪ್ರತಿ ಸಭೆಯಲ್ಲಿ ಹಲವು ದೂರು ಗಳನ್ನು ನೀಡಿದರೂ ಕೂಡ ಪ್ರಗತಿ ಶೂನ್ಯ. ಸಮಸ್ಯೆ ಬಗೆಹರಿದಿಲ್ಲ ಎಂದು ರಾಜು ಬೆಟ್ಟಿನಮನೆ ದೂರಿದರು. ಸಭೆಯಲ್ಲಿನ ಚರ್ಚೆ ಕುರಿತ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುತ್ತೇನೆ ಎಂದು ಮೆಸ್ಕಾಂ ಜೆಇ ಸಭೆಗೆ ತಿಳಿಸಿದರು.

ಗ್ರಾಪಂ ಹಾಗೂ ಇತರ ಇಲಾಖೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಆದರೆ ಬೀದಿದೀಪ, ವಾಲಿಕೊಂಡಿರುವ ವಿದ್ಯುತ್ ಕಂಬಗಳನ್ನು ಸುವ್ಯವಸ್ಥಿತ ಗೊಳಿಸುವ ಬಗ್ಗೆ ಹಲವು ಬಾರಿ ದೂರು ನೀಡಲಾಗಿದೆ. ಇಲಾಖೆ ಬೇಜವಬ್ದಾರಿಗೆ ಜನರು ಸಂಬಂಧಿತ ವಾರ್ಡ್ ಸದಸ್ಯರನ್ನು ದೂರುತ್ತಾರೆ. ಕೂಡಲೇ ಈ ಬಗ್ಗೆ ಸ್ಪಂದಿಸಿ ಎಂದು ಗ್ರಾಪಂ ಸದಸ್ಯರಾದ ಗಿರೀಶ್ ಉಪಾಧ್ಯ, ಪ್ರಕಾಶ್ ಮೊಗವೀರ ಆಗ್ರಹಿಸಿದರು.

ವಕ್ವಾಡಿ ರಸ್ತೆಯಲ್ಲಿರುವ ಬಾಲಕಿಯರ ವಸತಿ ಗೃಹದ ಬಳಿ ಕಿಡಿಗೇಡಿಗಳು ಕಾನೂನುಬಾಹಿರ ಚಟುವಟಿಕೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಪೊಲೀಸರ ಬಳಿ ಗ್ರಾಮಸ್ಥರು ಮನವಿ ಮಾಡಿದರು. ಈ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗಿದೆ. ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಕುಂದಾಪುರ ಠಾಣಾ ಸಹಾಯಕ ಉಪನಿರೀಕ್ಷಕ ಅಶೋಕ್ ಮಾಹಿತಿ ನೀಡಿದರು

ಗೋಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಸಂತೋಷ್ ಕುಮಾರ್ ನೊಡೇಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷೆ ಶಾಂತಾ, ಸದಸ್ಯರು ಉಪಸ್ಥಿತರಿದ್ದರು. ಗ್ರಾಪಂ ಪಿಡಿಓ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News