×
Ad

ಸಾಗರ್‌ಮಾಲಾ ಯೋಜನೆಯಡಿ ಹಂಗಾರಕಟ್ಟೆ ಕಿರುಬಂದರು ಅಭಿವೃದ್ಧಿ

Update: 2025-12-10 20:53 IST

ಸಾಂದರ್ಭಿಕ ಚಿತ್ರ | PC : PTI

ಉಡುಪಿ, ಡಿ.10: ಜಿಲ್ಲೆಯ ಹಂಗಾರಕಟ್ಟೆ ಮೀನುಗಾರಿಕಾ ಕಿರು ಬಂದರು ಯೋಜನೆಗೆ ಸಾಗರ್‌ಮಾಲಾ ಯೋಜನೆಯಡಿ 78.28 ಕೋಟಿ ರೂ. ಮಂಜೂರಾತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ್ ಸೋನೊವಾಲ್ ಅವರು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತಿಳಿಸಿದ್ದಾರೆ.

ಕೋಟ ಅವರ ಲಿಖಿತ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಚಿವರು ಇದನ್ನು ತಿಳಿಸಿದ್ದಾರೆ. ಹಳೆಯ ಮಂಗಳೂರು ಬಂದರಿನಲ್ಲಿ ಸರಕು ಮತ್ತು ಕ್ರೂಸ್ ಟರ್ಮಿನಲ್, ಲಕ್ಷದ್ವೀಪ ಜಟ್ಟಿ ನಿರ್ಮಾಣದ ಅಭಿವೃದ್ಧಿಗೆ 75.75 ಕೋಟಿ ರೂ, ಮಲ್ಪೆ ಮೀನುಗಾರಿಕಾ ಬಂದರನ್ನು ಮೇಲ್ದರ್ಜೆಗೇರಿಸಲು 12.50 ಕೋಟಿ ಅಲ್ಲದೆ, ಮಲ್ಪೆ ಮೀನುಗಾರಿಕಾ ಬಂದರಿನ ಮೂಲ ಸೌಕರ್ಯಗಳ ಬಹು ಮಹಡಿ ಪಾರ್ಕಿಂಗ್ ಸೌಲಭ್ಯದ ಅಭಿವೃದ್ಧಿಗೂ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಗಳ ತಂಗುದಾಣಕ್ಕಾಗಿ ಹೆಚ್ಚುವರಿ ಜಟ್ಟಿ, ಯಾಂತ್ರಿಕ ದೋಣಿಗಳ ಸಂಚಾರ ಸುಗಮಗೊಳಿಸಲು ಹೂಳೆತ್ತುವುದು ಸೇರಿದಂತೆ ಹಲವು ಪ್ರಸ್ತಾವನೆಗಳು ಮಂಜೂರಾತಿ ಹಂತದಲ್ಲಿವೆ ಎಂದೂ ಕೇಂದ್ರ ಸಚಿವರು ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸಚಿವರ ಉತ್ತರದಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಲ್ಲಿ ಕಾರವಾರ ಬಂದರು ಅಭಿವೃದ್ಧಿ 73 ಕೋಟಿ, ಹಳೆಯ ಮಂಗಳೂರು ಬಂದರು ಅಭಿವೃದ್ಧಿಗೆ 65 ಕೋಟಿ, ಗಂಗೊಳ್ಳಿ ಬಂದರು ಅಭಿವೃದ್ಧಿಗೆ 95 ಕೋಟಿ ಕಾರವಾರದ ಬಂದರಿನ ಬ್ರೇಕ್ ವಾಟರ್ಗೆ ರೂ.249 ಕೋಟಿ ಪ್ರಸ್ತಾವನೆ ಸ್ವೀಕೃತವಾಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ, ಖಾಸಗಿ (ಪಿಪಿಪಿ) ಸಹಭಾಗಿತ್ವದಲ್ಲಿ ಖೇಣಿ ಬಂದರು, ಮಾವಿನಕುರ್ವೆ ಬಂದರು, ಹೊನ್ನಾವರ ಬಂದರು, ಮಂಕಿ ಬಂದರು ಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಂಡಿದೆ ಎಂದು ಸಚಿವ ಸೋನೊವಾಲಾ ಸಂಸದ ಕೋಟ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News