ದೇಶದ 8.4 ಲಕ್ಷ ಸಹಕಾರಿ ಸಂಘಗಳ ಸಬಲೀಕರಣ ಕೇಂದ್ರದ ಗುರಿ : ಸಂಸದ ಕೋಟ ಪ್ರಶ್ನೆಗೆ ಅಮಿತ್ ಶಾ ಉತ್ತರ
ಕೋಟ ಶ್ರೀನಿವಾಸ ಪೂಜಾರಿ, ಅಮಿತ್ ಶಾ
ಉಡುಪಿ, ಡಿ.10: ರಾಷ್ಟ್ರೀಯ ಸಹಕಾರಿ ದತ್ತಾಂಶದ ಪ್ರಕಾರ ದೇಶದಲ್ಲಿ 8.4 ಲಕ್ಷ ಸಹಕಾರಿ ಸಂಘಗಳಿದ್ದು, 2021ರಲ್ಲಿ ಆರಂಭವಾದ ನೂತನ ಸಹಕಾರಿ ಕಾಯ್ದೆಯಂತೆ ಸಹಕಾರ್-ಸೇ ಸಮೃದ್ಧಿ ದೃಷ್ಟಿಕೋನವನ್ನು ಅನುಷ್ಠಾನ ಮಾಡಿ ದೇಶದಾದ್ಯಂತ ಸಹಕಾರಿ ಸಂಘಗಳನ್ನು ಬಲಪಡಿಸಲು ಕೇಂದ್ರ ಸರಕಾರ ಶ್ರಮಿಸುತ್ತಿದೆ ಎಂದು ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಮುಂದೆ ಪ್ರಾಥಮಿಕ ಸಹಕಾರಿ ಸಂಘಗಳನ್ನು ಆರ್ಥಿಕವಾಗಿ ಗಟ್ಟಿಗೊಳಿಸುವುದು ಮತ್ತು ಪಾರದರ್ಶಕ ಆಡಳಿತ ನಡೆಸುವಂತೆ ನೋಡಿಕೊಳ್ಳುವುದು, ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕ್ ಗಳನ್ನು ಆರ್ಥಿಕವಾಗಿ ಬಲಿಷ್ಠ ಗೊಳಿಸುವುದು, ಆದಾಯ ತೆರಿಗೆ ಕಾಯ್ದೆಯಲ್ಲಿ ಸಹಕಾರಿ ಸಂಘಗಳಿಗೆ ಪರಿಹಾರ, ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನರ್ ಚೇತನ, ರಾಷ್ಟ್ರಮಟ್ಟದಲ್ಲಿ ಮೂರು ಬಹು ರಾಜ್ಯಗಳನ್ನೊಳಗೊಂಡ ಸಹಕಾರಿ ಸಂಸ್ಥೆಗಳ ಸ್ಥಾಪನೆ, ವ್ಯವಹಾರ ಸುಲಭಗೊಳಿಸಲು ಏಕರೀತಿಯ ಮಾಹಿತಿ ತಂತ್ರಜ್ಞಾನ ಬಳಕೆ, ರಾಷ್ಟ್ರೀಯ ಸಹಕಾರಿ ನೀತಿ ರಚನೆ ದೇಶದಲ್ಲಿ ಮೊದಲ ಬಾರಿಗೆ ತ್ರಿಭುವನ್ ಸಹಕಾರಿ ಯುನಿವರ್ಸಿಟಿ ನಿರ್ಮಾಣ ಮುಂತಾದ ಕ್ರಾಂತಿಕಾರಿ ಯೋಜನೆಯನ್ನು ನೂತನ ಕಾಯ್ದೆಯಲ್ಲಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ತ್ರಿಭುವನ್ ಯುನಿವರ್ಸಿಟಿಯ ಮೂಲಕ ನಾಲ್ಕು ಸ್ನಾತಕೋತ್ತರ ಪದವಿಗಳಿಗೆ ಅವಕಾಶ ನೀಡಿದ್ದು, ಐ.ಆರ್.ಎಮ್.ಎ ಮೂಲಕ ಗ್ರಾಮೀಣ ಸಹಕಾರಿ ಎಂಬಿಎ, ಕೃಷಿ ನಿರ್ವಹಣಾ ವ್ಯವಹಾರ ಎಂ.ಬಿ.ಎ, ಸಹಕಾರಿ ಬ್ಯಾಂಕಿಂಗ್ ಹಣಕಾಸು ನಿರ್ವಹಣೆಯ ಎಂ.ಬಿ.ಎ ಮುಂತಾದ ಕೋರ್ಸ್ಗಳ ಮೂಲಕ ಭವಿಷ್ಯದ ಸಹಕಾರಿ ಕ್ಷೇತ್ರಕ್ಕೆ ಅಗತ್ಯ ಮಾನವ ಶಕ್ತಿ ಒದಗಿಸುವುದು. ಸಹಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ತರಬೇತಿ, ಶಿಕ್ಷಣ, ಸಾಮರ್ಥ್ಯ ಒದಗಿಸುವುದು ನೂತನ ಸಹಕಾರಿ ಕಾಯ್ದೆ ಮತ್ತು ತ್ರಿಭುವನ್ ಯೂನಿವರ್ಸಿಟಿಯ ಗುರಿ ಎಂದು ಸಹಕಾರಿ ಸಚಿವ ಅಮಿತ್ ಶಾ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ