ಕಾಪು | ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಭವಿಷ್ಯದ ಕನ್ನಡ ಸಂಸ್ಕೃತಿ ಪರಂಪರೆಯ ಅವನತಿಯ ಮುನ್ಸೂಚನೆ: ಮರಾಠೆ
ಕಾಪು, ಡಿ.10: ಬಾಲ್ಯದಲ್ಲಿಯೇ ಉತ್ತಮ, ಆದರ್ಶ, ಜೀವನಮೌಲ್ಯ, ಸಂಸ್ಕಾರ, ಸಂಸ್ಕೃತಿಯ ಪರಿಚಯದೊಂದಿಗೆ ಬದುಕುವ ಕಲೆಯನ್ನು ಮಕ್ಕಳಲ್ಲಿ ರೂಢಿಸಿ, ಭಷ್ಯದ ದಿಕ್ಕನ್ನು ತೋರಿಸಲು ಪ್ರೇರಣೆ ನೀಡಿದ ಶತಮಾನೋತ್ತರ ಇತಿಹಾಸ ಇರುವ ಕನ್ನಡ ಮಾಧ್ಯಮ ಶಾಲೆಗಳು ಇಂದು ಒಂದೊಂದಾಗಿ ಮುಚ್ಚುತ್ತಿರುವುದು ಭವಿಷ್ಯದ ಕನ್ನಡ ಸಂಸ್ಕೃತಿ ಪರಂಪರೆಯ ಅವನತಿಯ ಮುನ್ಸೂಚನೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಹೇಳಿದ್ದಾರೆ.
121 ವರ್ಷಗಳ ಇತಿಹಾಸ ಹೊಂದಿರುವ ಪಾಂಗಾಳ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಆಂಗ್ಲ ಭಾಷಾ ವ್ಯಾಮೋಹದಿಂದ ಕನ್ನಡ ಮಾತ್ರವಲ್ಲದೆ ಈ ನಾಡಿನ ಅನೇಕ ಮಾತೃಭಾಷೆಗಳೇ ನಾಶವಾಗುತ್ತಿವೆ. ಒಂದು ಭಾಷೆಯ ವಿನಾಶದಿಂದ ಅದರ ಇತಿಹಾಸ, ಸಂಸ್ಕೃತಿಯೇ ನಾಶವಾಗುತ್ತದೆ. ಮಾತೃಭಾಷೆಯ ಜೊತೆಗೆ ಇತರ ಭಾಷೆಗಳನ್ನೂ ಕಲಿಸಿ ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಇನ್ನಂಜೆ ಗ್ರಾಪಂ ಸದಸ್ಯ ಸೋನು ಪಾಂಗಾಳ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ನಿವೃತ್ತ ಪ್ರಾಂಶುಪಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಎ. ಸ್ವಾಗತಿಸಿ, ಶಾಲಾ ವರದಿ ಓದಿದರು. ಅಂಗನವಾಡಿ ಶಿಕ್ಷಕಿ ಗೀತಾ ಪಿ. ಅಂಗನವಾಡಿ ಚಟುವಟಿಕೆಗಳ ಮಾಹಿತಿ ನೀಡಿದರು. ಹಳೆದ್ಯಾರ್ಥಿ ಸಂಘದ ವರದಿಯನ್ನು ಜ್ಯೋತಿ ಓದಿದರು. ಶಾಲಾ ಸಂಚಾಲಕ ಅನಂತರಾಜ್ ಭಟ್ ಉಪಸ್ಥಿತರಿದ್ದರು. ಗೌರವ ಶಿಕ್ಷಕಿ ಆಶಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿಶಾಲ ವಂದಿಸಿದರು.