ತನಿಖೆ ವಿಳಂಬವಾದರೆ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮತ್ತೆ ಉಪವಾಸ ಸತ್ಯಾಗ್ರಹ: ದಿವ್ಯಾ ನಾಯಕ್
ಕಾರ್ಕಳ: ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವು ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಕುರಿತು ನ್ಯಾಯಯುತ ಹಾಗೂ ತ್ವರಿತ ತನಿಖೆ ನಡೆಸದಿದ್ದರೆ ಮತ್ತೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಕಾರ್ಕಳ ಸಮಾನ ಮನಸ್ಕ ತಂಡದ ದಿವ್ಯಾ ನಾಯಕ್ ಎಚ್ಚರಿಸಿದ್ದಾರೆ.
ಪರಶುರಾಮ ಮೂರ್ತಿ ಪ್ರತಿಷ್ಠಾಪನೆಯ ದಿನದಿಂದಲೇ ಪ್ರತಿಮೆಯ ಶುದ್ಧತೆ ಪರಿಶೀಲನೆ ಹಾಗೂ ಥೀಮ್ ಪಾರ್ಕ್ ಆವರಣದಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ಆಗ್ರಹಿಸಿ ನಾವು 14 ಮಂದಿ ಉಪವಾಸ ಸತ್ಯಾಗ್ರಹ ನಡೆಸಿದ್ದೇವೆ. ಆದರೆ ಆ ಸಂದರ್ಭದಲ್ಲಿ ಸ್ಥಳೀಯ ಶಾಸಕ ವಿ. ಸುನಿಲ್ ಕುಮಾರ್ ಈ ವಿಚಾರದಲ್ಲಿ ಸಂಪೂರ್ಣ ಮೌನ ವಹಿಸಿದ್ದರು ಎಂದು ಅವರು ಆರೋಪಿಸಿದರು. ಪರಶುರಾಮ ಪ್ರತಿಮೆಯ ಅರ್ಧ ಭಾಗ ಕಳವಾಗುವವರೆಗೆ ಶಾಸಕರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಆದರೆ ಇತ್ತೀಚಿನ ಕಳ್ಳತನ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗುವ ಮುನ್ನವೇ ಶಾಸಕರು ಫೇಸ್‌ಬುಕ್‌ನಲ್ಲಿ ದರೋಡೆ ಕುರಿತು ಪೋಸ್ಟ್ ಮಾಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ದಿವ್ಯಾ ನಾಯಕ್ ಹೇಳಿದರು.
ಇನ್ನಷ್ಟು ಆತಂಕಕಾರಿ ಸಂಗತಿಯೆಂದರೆ, ಇತ್ತೀಚಿನ ದರೋಡೆ ಪ್ರಕರಣದ ದೂರನ್ನು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಅರುಣ್‌ಕುಮಾರ್ ಅವರು ದಾಖಲಿಸಿದ್ದಾರೆ. ಇದೇ ಅರುಣ್‌ಕುಮಾರ್ ಅವರು ಪರಶುರಾಮ ಥೀಮ್ ಪಾರ್ಕ್ ಪ್ರತಿಮೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹೈಕೋರ್ಟ್‌ಗೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಐಪಿಸಿ 420, 409, 120(ಬಿ), 34 ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೆ ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮುನ್ನವೇ ಯಾವುದೇ ಸ್ಪಷ್ಟನೆ ನೀಡದೆ ಅವರ ಅಮಾನತನ್ನು ರದ್ದುಗೊಳಿಸಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು ಅರುಣ್‌ಕುಮಾರ್ ಅವರ ಅಮಾನತು ರದ್ದುಪಡಿಸಿದ ಆಧಾರವೇನು? ಪ್ರಕರಣದ ಪ್ರಮುಖ ಅಂಶಗಳನ್ನು ಮರೆಮಾಚುವ ಅಥವಾ ತಿರುಚುವಲ್ಲಿ ಅವರು ಭಾಗಿಯಾಗಿದ್ದರೆ ಅದರ ಹೊಣೆಗಾರಿಕೆ ಯಾರದು? ಎಂಬುದಕ್ಕೆ ಉತ್ತರ ನೀಡಬೇಕೆಂದು ದಿವ್ಯಾ ನಾಯಕ್ ಒತ್ತಾಯಿಸಿದರು.
ಪೊಲೀಸ್ ಇಲಾಖೆ ಆರೋಪಪಟ್ಟಿ ಸಲ್ಲಿಸಿ 6–7 ತಿಂಗಳು ಕಳೆದರೂ ಹೈಕೋರ್ಟ್‌ನಲ್ಲಿ ಒಂದೂ ವಿಚಾರಣೆ ನಡೆಯದಿರುವುದು, 2023ರ ಚುನಾವಣೆಯ ಸಂದರ್ಭದಲ್ಲಿ ನಡೆದಂತೆ ಈ ಪ್ರಕರಣವನ್ನೂ 2028ರ ಚುನಾವಣೆಯವರೆಗೆ ತಡೆಹಿಡಿಯಲಾಗುತ್ತಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ ಎಂದು ಅವರು ಹೇಳಿದರು.
ರಾಜಕೀಯ ಪಕ್ಷಗಳಿಗೆ ಇದು ಚುನಾವಣಾ ರಾಜಕೀಯವಾಗಿರಬಹುದು. ಆದರೆ ಪ್ರತಿಯೊಬ್ಬ ಹಿಂದೂವಿಗೆ ಇದು ಧಾರ್ಮಿಕ ನಂಬಿಕೆಯ ಪ್ರಶ್ನೆಯಾಗಿದೆ. ನ್ಯಾಯಯುತ ತನಿಖೆಗಾಗಿ ಪೊಲೀಸ್ ಇಲಾಖೆಗೆ ಈಗಾಗಲೇ ಪತ್ರ ಸಲ್ಲಿಸಲಾಗಿದೆ. ಜೊತೆಗೆ ಆದ್ಯತೆಯ ಮೇರೆಗೆ ಥೀಮ್ ಪಾರ್ಕ್ ಆವರಣದಲ್ಲಿ ಸಿಸಿಟಿವಿ ಅಳವಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಮನವಿ ಮಾಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಅನುಮತಿ ನೀಡಬಾರದೆಂದು ಸಹ ಆಗ್ರಹಿಸಲಾಗಿದೆ ಎಂದು ಅವರು ಹೇಳಿದರು.
ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ. ತನಿಖೆ ವಿಳಂಬವಾದರೆ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮತ್ತೆ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ದಿವ್ಯಾ ನಾಯಕ್ ಸ್ಪಷ್ಟಪಡಿಸಿದ್ದಾರೆ.