ಉಡುಪಿ : ಹಳೇಬೀಡು ಮೂಲದ ಅಪ್ರಾಪ್ತ ಬಾಲಕಿಯ ರಕ್ಷಣೆ
ಉಡುಪಿ, ಜ.12: ಅಸಹಾಯಕ ಸ್ಥಿತಿಯಲ್ಲಿದ್ದ ಅಪ್ರಾಪ್ತ ಪ್ರಾಯದ ಬಾಲಕಿಯನ್ನು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರಕ್ಷಿಸಲಾಗಿದೆ.
ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಾರ್ಥಿಯಾಗಿ ತೆರಳಿದ್ದ ಆದಿ ಉಡುಪಿಯ ಪ್ರೇಮ ರಾಮಚಂದ್ರ ಅವರಿಗೆ ಬಾಲಕಿ ಕಂಡುಬಂದಿದ್ದಾಳೆ. ಅವರು ಬಾಲಕಿಯ ಚಲನ ವಲನದಲ್ಲಿ ಸಂಶಯಗೊಂಡು ವಿಚಾರಿಸಿದಾಗ, ಮನನೊಂದು ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾಳೆ.
ತಕ್ಷಣ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ನಿತ್ಯಾನಂದ ಅವರು ಕೂಡಲೇ ನಗರ ಪೊಲೀಸ್ ಠಾಣೆಗೆ ವಿಷಯ ತಿಳಿಸಿ, ಬಾಲಕಿಗೆ ದೊಡ್ಡಣಗುಡ್ಡೆಯ ಬಾಲಕಿಯರ ಬಾಲ ಮಂದಿರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿದರು. ಈ ಕಾರ್ಯಾಚರಣೆಗೆ ಹರೀಶ್ ಪೂಜಾರಿ, ಉದ್ಯಾವರ ಅವರು ಸಹಕರಿಸಿದರು.
ಇದೇ ವೇಳೆ ಬಾಲಕಿ ನಾಪತ್ತೆಯಾಗಿರುವ ಕುರಿತು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿ ಉಡುಪಿಯಲ್ಲಿ ಪತ್ತೆಯಾಗಿರುವ ಮಾಹಿತಿ ತಿಳಿದ ಬಳಿಕ, ಹಳೇಬೀಡು ಪೊಲೀಸರು ಬಾಲಕಿಯ ತಾಯಿಯೊಂದಿಗೆ ಉಡುಪಿಗೆ ಆಗಮಿಸಿದ್ದರು. ಬಳಿಕ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಬಾಲಕಿಯನ್ನು ಹಳೇಬೀಡು ಪೊಲೀಸರಿಗೆ ಒಪ್ಪಿಸಲಾಯಿತು.
ಬಾಲಕಿಯು ತಾಯಿಯೊಂದಿಗೆ ತೆರಳಲು ನಿರಾಕರಿಸಿದ ಕಾರಣ, ಚಿಕ್ಕಮಗಳೂರಿನ ಬಾಲಕಿಯರ ಬಾಲ ಮಂದಿರದಲ್ಲಿ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.