ಎಸ್ಟಿಗಳಲ್ಲದ ’ಮೇರಾ’, ’ಮನ್ಸ’ ಜಾತಿಗಳ ಒಳಮೀಸಲಾತಿ ಸಮೀಕ್ಷೆೆ: ಪರಿಶಿಷ್ಟರ ಮಹಾಒಕ್ಕೂಟ ಆರೋಪ
ಉಡುಪಿ: ಕರ್ನಾಟಕ ರಾಜ್ಯಕ್ಕೆ ರಾಷ್ಟ್ರಪತಿಗಳಿಂದ ಅಧಿಸೂಚಿತ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇಲ್ಲದ ’ಮೇರಾ’ ಮತ್ತು ’ಮನ್ಸ’ ಹೆಸರಿನ ಜಾತಿಗಳನ್ನು ಅಧಿಕಾರಿಗಳು ಒಳ ಮೀಸಲಾತಿ ಕುರಿತ ಸಮೀಕ್ಷೆಯಲ್ಲಿ ವ್ಯವಸ್ಥಿತವಾಗಿ ಸೇರಿಸುತ್ತಿದ್ದಾರೆ. ಇದು ಕೂಡ ದೌರ್ಜನ್ಯ ಹಾಗೂ ಅಕ್ರಮಣವಾಗಿದೆ. ಆದುದರಿಂದ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದು ಕೊಳ್ಳಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇರಾ ಮತ್ತು ಮನ್ಸ ಪರಿಶಿಷ್ಟ ಜಾತಿಗೆ ಸೇರಿದ ಜಾತಿಗಳಲ್ಲ. ಆದರೂ ಸಮೀಕ್ಷೆ ಯಲ್ಲಿ ಅವರಿಗೆ ಆದಿದ್ರಾವಿಡ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿರುವ ಉಡುಪಿ ಜಿಲ್ಲಾಧಿಕಾರಿಗಳ ಕ್ರಮ ’ಸಂವಿಧಾನ ವಿರೋಧಿ ಹಾಗೂ ಕಾನೂನು ಬಾಹಿರ’ವಾಗಿದೆ ಎಂದು ಆರೋಪಿಸಿದರು.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಹಾ ಒಕ್ಕೂಟದ ನಿಯೋಗವು ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ದೂರು ಸಲ್ಲಿಸಿದೆ. ರಾಷ್ಟ್ರಪತಿ ಗಳಿಂದ ಅಧಿಸೂಚಿತ ಪಟ್ಟಿಯಲ್ಲಿರುವ 101 ಜಾತಿಗಳನ್ನು ಹೊರತು ಪಡಿಸಿ, ಬೇರೆ ಯಾವುದೇ ಜಾತಿಗಳನ್ನು ಈ ಪಟ್ಟಿಗೆ ಸೇರಿಸುವ ಅಥವಾ ಕಡಿತಗೊಳಿಸುವ ಅಧಿಕಾರ ಕೇವಲ ಭಾರತದ ಸಂಸತ್ತಿಗೆ ಮಾತ್ರ ಇದೆ. ಇದರ ಯಾವುದೇ ರೀತಿಯ ಉಲ್ಲಂಘನೆ ಸಂವಿಧಾನ ವಿರೋಧಿ ಹಾಗೂ ಕಾನೂನು ಬಾಹಿರ ಕೃತ್ಯ ಎನಿಸಿಕೊಳ್ಳುತ್ತದೆ ಎಂದರು.
ಜಿಲ್ಲಾಧಿಕಾರಿಗಳ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಸಂವಿಧಾನ ವಿರೋಧಿ ಮತ್ತು ಕಾನೂನು ಬಾಹಿರ ವಿಧಾನದ ಮೂಲಕ ನಡೆಸಲಾದ ಒಳಮೀಸಲಾತಿ ಕುರಿತ ಸಮೀಕ್ಷೆಗೆ ಕಾನೂನಿನ ಮಾನ್ಯತೆ ಇರಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ರಾಜ್ಯ ಸರಕಾರ ಮತ್ತು ನ್ಯಾ.ಎಚ್.ಎನ್.ನಾಗಮೋಹನದಾಸ ಏಕ ಸದಸ್ಯ ವಿಚಾರಣಾ ಆಯೋಗ ಮಾನ್ಯ ಮಾಡಬಾರದು. ಈ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ಕ್ರಮಗಳನ್ನು ಸಂಬಂಧ ಪಟ್ಟ ಎಲ್ಲರೂ ತುರ್ತಾಗಿ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಹಾಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ್ ಕೊಂಚಾಡಿ, ರಾಜ್ಯ ಮುಖಂಡ ಸುಂದರ್ ಮೇರಾ, ಜಿಲ್ಲಾಧ್ಯಕ್ಷ ಅಪ್ಪು ಮರ್ಣೆ, ಆದಿದ್ರಾವಿಡ ಸಮಾಜದ ರಾಜ್ಯ ಮುಖಂಡ ಅನಿಲ್ ಕಂಕನಾಡಿ, ಉಡುಪಿಯ ಮುಂಡಾಲ ಸಮಾಜದ ಮುಖಂಡ ಬಿ.ಕೆ.ರಾಜು, ಅಶೋಕ್ ಕೊಂಚಾಡಿ, ಪದ್ಮನಾಭ ಮೂಡಬಿದ್ರೆ ಉಪಸ್ಥಿತರಿದ್ದರು.