ಕೆ.ಎಂ.ಇ.ಎಸ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಕೆ. ಬಾಲಕೃಷ್ಣರಾವ್ ಅಧಿಕಾರ ಸ್ವೀಕಾರ
ಕಾರ್ಕಳ: ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೆ.ಎಂ.ಇ.ಎಸ್ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಕೆ. ಬಾಲಕೃಷ್ಣರಾವ್ ಅಧಿಕಾರ ಸ್ವೀಕರಿಸಿದ್ದಾರೆ.
ಬಾಲಕೃಷ್ಣರಾವ್ ಅವರು ಆಂಗ್ಲಭಾಷೆ ಮತ್ತು ಗಣಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ನಲವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ. ಅವರು ವಿಜ್ಞಾನ ಶಿಕ್ಷಕರಾಗಿ ಹಾಗೂ ಆಂಗ್ಲ ಮತ್ತು ಗಣಿತ ಉಪನ್ಯಾಸಕರಾಗಿ ವಿವಿಧ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿದ್ದು, ಕೆಲವು ವಿದ್ಯಾಸಂಸ್ಥೆಗಳಲ್ಲಿ ಪ್ರಾಂಶುಪಾಲರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.
ಎನ್.ಸಿ.ಸಿ. ನೇವಲ್ ವಿಂಗ್‌ನ ಕಮಿಷನ್‌ಡ್ ಅಧಿಕೃತರಾಗಿದ್ದ ಇವರು ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಕೊಚ್ಚಿನ್ ಹಾಗೂ ವಿಶಾಖಪಟ್ಟಣಂ ನೇವಲ್ ಬೇಸ್‌ಗಳಲ್ಲಿ ತರಬೇತಿ ಪಡೆದಿದ್ದಾರೆ. ಇವರಿಗೆ ಉತ್ತರ ಭಾರತದ ಮನ್ಸೂರಿ, ಗೋವಾ ಮತ್ತು ಇತರೆ ಸ್ಥಳಗಳಲ್ಲಿ ನಡೆದ ರಾಷ್ಟ್ರೀಯ ಟ್ರಕ್ಕಿಂಗ್ ಎಕ್ಸ್‌ಪೆಡಿಷನ್ ಹಾಗೂ ಬೆಂಗಳೂರಿನ ಸೋಮನಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಪಾಲ್ಗೊಂಡ ಅನುಭವವಿದೆ.
ಸಾಹಿತ್ಯ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿದ್ದು, ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಕಥೆ, ಪ್ರಬಂಧ ಹಾಗೂ ಚಿಂತನಾತ್ಮಕ ಕಾರ್ಯಕ್ರಮಗಳನ್ನು ಮಂಡಿಸಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಅವರು ನಾಟಕ ಹಾಗೂ ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸಿ, ಸಾಹಿತ್ಯ, ನಾಟ್ಯ ಹಾಗೂ ಸಂಸ್ಕೃತಿ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಬಾಲಕೃಷ್ಣರಾವ್ ಅವರು ಕಾರ್ಕಳದ ಸಾಹಿತ್ಯ ಸಂಘ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷತ್‌ನ ಸಕ್ರೀಯ ಸದಸ್ಯರಾಗಿದ್ದು, ಅನೇಕ ಕನ್ನಡ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನವಾಚನ ಮಾಡಿದ್ದಾರೆ. ಅವರು ಕಾರ್ಕಳ ಇಂಟರಾಕ್ಟ್ ಕ್ಲಬ್ ಹಾಗೂ ಜೇಸೀಸ್ ಸಂಸ್ಥೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳನ್ನು ಪಡೆದಿರುವ ಇವರ 'ಪಥ' ಎಂಬ ಕನ್ನಡ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
ಈ ಮಹತ್ವದ ನೇಮಕಾತಿಗೆ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್ ಇಮ್ತಿಯಾಝ್ ಅಹಮ್ಮದ್ ಅವರು ಬಾಲಕೃಷ್ಣರಾವ್ ಅವರಿಗೆ ಹಾರೈಕೆಗಳು ಹಾಗೂ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.