×
Ad

ಕರ್ನಾಟಕ ರಾಜ್ಯ ಜೂನಿಯರ್, 23 ವರ್ಷದೊಳಗಿನ ಕ್ರೀಡಾಕೂಟ: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್; 4 ವಿಭಾಗಗಳಲ್ಲಿ ತಂಡ ಪ್ರಶಸ್ತಿ

Update: 2025-08-25 21:01 IST

ಉಡುಪಿ, ಆ.25: ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ದಲ್ಲಿ ಮೂರು ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಹಾಗೂ 23 ವರ್ಷದೊಳಗಿನವರ ಅಥ್ಲೆಟಿಕ್ ಮೀಟ್‌ನಲ್ಲಿ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳೇ ಪ್ರಭುತ್ವವನ್ನು ಮೆರೆದಿದ್ದು, ನಾಲ್ಕು ವಿಭಾಗಗಳಲ್ಲಿ ತಂಡ ಪ್ರಶಸ್ತಿಯೂ ಸೇರಿದಂತೆ ಕೂಟದ ಸಮಗ್ರ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡರು.

ಸಮಗ್ರ ಪ್ರಶಸ್ತಿಯನ್ನು ರನ್ನರ್ ಅಪ್ ಸ್ಥಾನ ಬೆಂಗಳೂರು ತಂಡದ ಪಾಲಾಯಿತು. ದಕ್ಷಿಣ ಕನ್ನಡದ ಅಥ್ಲೀಟ್‌ಗಳು 14 ವರ್ಷದೊಳಗಿನ ವಿಭಾಗದಲ್ಲಿ 43 ಅಂಕಗಳೊಂದಿಗೆ (ರನ್ನರ್‌ಅಪ್ ಶಿವಮೊಗ್ಗ-24), 16ವರ್ಷದೊಳಗಿನ ವಿಭಾಗ ದಲ್ಲಿ 77 ಅಂಕ (ರನ್ನರ್ ಅಪ್ ಬೆಂಗಳೂರು-66), 18ವರ್ಷದೊಳಗಿನ ವಿಭಾಗದಲ್ಲಿ 87 ಅಂಕಗಳೊಂದಿಗೆ (ರನ್ನರ್‌ಅಪ್ ಉಡುಪಿ-80), 20 ವರ್ಷದೊಳಗಿನವರ ವಿಭಾಗದಲ್ಲಿ 148 ಅಂಕಗಳೊಂದಿಗೆ (ರನ್ನರ್ ಅಪ್ ಬೆಂಗಳೂರು-120) ಚಾಂಪಿಯನ್ ಪಟ್ಟ ಪಡೆದರು.

23 ವರ್ಷದೊಳಗಿನವರ ವಿಭಾಗದಲ್ಲಿ ಮಾತ್ರ ಬೆಂಗಳೂರು ತಂಡ 127 ಅಂಕಗಳೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ದಕ್ಷಿಣ ಕನ್ನಡ ಜಿಲ್ಲಾ ತಂಡ 100 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಆದರೆ ಪುರುಷ ಹಾಗೂ ಮಹಿಳೆಯರಲ್ಲಿ ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನಕ್ಕೆ ನೀಡುವ ವೈಯಕ್ತಿಕ ಬೆಸ್ಟ್ ಅಥ್ಲೀಟ್ ಪ್ರಶಸ್ತಿ ಎಲ್ಲಾ ತಂಡಗಳಲ್ಲಿ ಹಂಚಿಹೋದವು. ಬೆಸ್ಟ್ ಅಥ್ಲೀಟ್ ವೈಯಕ್ತಿಕ ಪ್ರಶಸ್ತಿಗಳು:

ಪುರುಷರ ವಿಭಾಗ: 23 ವರ್ಷದೊಳಗಿನವರ ವಿಭಾಗದಲ್ಲಿ 200ಮೀ. ಸ್ಪರ್ಧೆಯನ್ನು ದಾಖಲೆಯೊಂದಿಗೆ ಗೆದ್ದ ಧಾರವಾಡದ ಪ್ರಸನ್ನ ಕುಮಾರ್ (1021ಅಂಕ), 20ವರ್ಷದೊಳಗಿನವರ ವಿಭಾಗದಲ್ಲಿ 400ಮೀ. ಸ್ಪರ್ಧೆಯನ್ನು ಗೆದ್ದ ಬೆಂಗಳೂರು ತುಮಕೂರಿನ ನಿತಿನ್ ಗೌಡ ಎಂ. (981 ಅಂಕ).

18ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 200ಮೀ. ಸ್ಪರ್ಧೆಯನ್ನು ಹೊಸ ದಾಖಲೆಯೊಂದಿಗೆ ಗೆದ್ದ ಮೈಸೂರಿನ ಚಿರಂತ್ (1012 ಅಂಕ), 16ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 600ಮೀ.ನಲ್ಲಿ ಚಿನ್ನದ ಗೆದ್ದ ಶಿವಮೊಗ್ಗದ ಶಂರತ್ ಕೆ.ಜೆ. (802ಅಂಕ), 14ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಟ್ರಯತ್ಲಾನ್‌ನ್ನು ಗೆದ್ದ ಮೈಸೂರಿನ ಆದರ್ಶ್.

ಮಹಿಳೆಯರ ವಿಭಾಗ: 23ವರ್ಷದೊಳಗಿನವರ ವಿಭಾಗದಲ್ಲಿ ಲಾಂಗ್‌ಜಂಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ದಕ್ಷಿಣ ಕನ್ನಡದ ಸಿಂಚನ ಎಂ.ಎಸ್. (1003ಅಂಕ), 20 ವರ್ಷದೊಳಗಿನವರ ವಿಭಾಗದಲ್ಲಿ 100ಮೀ. ಸ್ಪ್ರಿಂಟ್‌ನಲ್ಲಿ ಚಿನ್ನ ಗೆದ್ದ ಉಡುಪಿಯ ಶೃತಿ ಪಿ.ಶೆಟ್ಟಿ (980 ಅಂಕ).

18ವರ್ಷದೊಳಗಿನ ಬಾಲಕಿಯರ 100ಮೀ. ಸ್ಪ್ರಿಂಟ್‌ನಲ್ಲಿ ಚಿನ್ನದ ಗೆದ್ದ ಬೆಂಗಳೂರಿನ ಸುಚಿತ್ರಾ ಎಸ್.(962ಅಂಕ), 16ವರ್ಷದೊಳಗಿನ ಬಾಲಕಿ ಯರ 600ಮೀ. ಓಟವನ್ನು ಗೆದ್ದ ಬೆಂಗಳೂರಿನ ಸಮಂತ ಮಿಕಾ (961), 14ವರ್ಷದೊಳಗಿನ ಬಾಲಕಿಯರ ಟ್ರಯತ್ಲಾನ್‌ನ್ನು ಗೆದ್ದ ದಕ್ಷಿಣ ಕನ್ನಡದ ಅದ್ವಿಕಾ ಕೆ.ಪಿ.

ಕೊನೆಯ ದಿನ 6 ನೂತನ ದಾಖಲೆ: ಮೂರು ದಿನಗಳ ಈ ಕ್ರೀಡಾಕೂಟ ದಲ್ಲಿ 20ಕ್ಕೂ ಅಧಿಕ ಹೊಸ ದಾಖಲೆಗಳು ಸ್ಥಾಪಿಸಲ್ಪಟ್ಟವು. ಮೊದಲ ದಿನ 10ಕ್ಕೂ ಅಧಿಕ ದಾಖಲೆಗಳು ಬಂದಿದ್ದರೆ, ಎರಡನೇ ದಿನವಾದ ನಿನ್ನೆ ಎಂಟು ಹೊಸ ದಾಖಲೆಗಳು ಬರೆಯಲ್ಪಟ್ಟವು. ಕೊನೆಯ ದಿನವಾದ ಇಂದು ಇನ್ನೂ ಆರು ದಾಖಲೆಗಳನ್ನು ಹೊಸದಾಗಿ ಬರೆಯಲಾಯಿತು.

23ವರ್ಷದೊಳಗಿನ ಪುರುಷರ 200ಮೀ.ಓಟದಲ್ಲಿ ಧಾರವಾಡದ ಪ್ರಸನ್ನ ಕುಮಾರ್ 21.32ಸೆ.ಗಳಲ್ಲಿ ಗುರಿ ಮುಟ್ಟಿ 2022ರಲ್ಲಿ ತಾನೇ ಬರೆದ 21.45ಸೆ. ದಾಖಲೆಯನ್ನು ಮುರಿದರು. ಬೆಂಗಳೂರಿನ ಓಂಕಾರ್ ಅವರು 23ವರ್ಷ ದೊಳಗಿನ ಪುರುಷರ 5000ಮೀ.ನಲ್ಲಿ 14:23.64ಸೆ.ಗಳ ಹೊಸ ದಾಖಲೆ ಬರೆದು ಕಳೆದ ವರ್ಷ ಎ.ಆರ್.ರೋಹಿತ್ ಸ್ಥಾಪಿಸಿದ 15:03.45ಸೆ. ದಾಖಲೆಯನ್ನು ಮುರಿದರು.

23ವರ್ಷದೊಳಗಿನವರ ಸ್ಟೀಪಲ್‌ಚೇಸ್‌ನಲ್ಲಿ ಉತ್ತರ ಕನ್ನಡದ ಗಣಪತಿ ಅವರು 9:25.93ಸೆ.ಗಳ ಸಾಧನೆ ಯೊಂದಿಗೆ ಸಂಜೀವ ಕುಮಾರ್ ಹೆಸರಿನಲ್ಲಿದ್ದ ಹಳೆ ದಾಖಲೆ 9:52.41ಸೆ.ಯನ್ನು ತನ್ನ ಹೆಸರಿಗೆ ಬರೆದರು. 18ವರ್ಷದೊಳಗಿನ ಬಾಲಕರ 200ಮೀ. ಓಟದಲ್ಲಿ ಮೈಸೂರಿನ ಚಿರಂತ್ 200ಮೀ.ಓಟದಲ್ಲಿ 21.38ಸೆ.ಗಳ ದಾಖಲೆ ಬರೆದಿದ್ದು, 2023ರಲ್ಲಿ ಮುತ್ತಣ್ಣ ವೈ.ಕೆ. ಹೆಸರಿನಲ್ಲಿದ್ದ 21.51ಸೆ. ದಾಖಲೆ ಅಳಿಸಿದರು.

ಅದೇ ರೀತಿ 18ವರ್ಷದೊಳಗಿನ ಬಾಲಕರ 5000ಮೀ. ನಡಿಗೆಯಲ್ಲಿ ಬೆಳಗಾವಿಯ ಸಿದ್ರಾಯಪ್ಪ ಪುಂಗಿ ಅವರು 26:03.98ಸೆ.ಗಳ ಹೊಸ ದಾಖಲೆ ಬರೆದರು. ಅವರು ಕಳೆದ ವರ್ಷ ವಿನಾಯಕ ಜಿ.ಕೆ. ಸ್ಥಾಪಿಸದ ದಾಖಲೆಯನ್ನು ಉತ್ತಮ ಪಡಿಸಿದರು.

23ವರ್ಷದೊಳಗಿನ ಮಹಿಳೆಯರ 200ಮೀ. ಸ್ಪ್ರಿಂಟ್‌ನಲ್ಲಿ ಬೆಂಗಳೂರಿನ ಶ್ರೇಯಾ ರಾಜೇಶ್ ಅವರು 24.75ಸೆ.ಗಳ ಹೊಸ ದಾಖಲೆಯನ್ನು ತನ್ನ ಹೆಸರಿಗೆ ಬರೆದರು. ಅವರು ಕಳೆದ ವರ್ಷ ಜ್ಯೋತಿಕಾ ಬರೆದ 24.90ಸೆ. ದಾಖಲೆಯನ್ನು ಮುರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News