×
Ad

ಧರ್ಮಸ್ಥಳದ ವಿರುದ್ಧದ ಅಪಪ್ರಚಾರಕ್ಕೆ ಪೂರ್ಣವಿರಾಮ ಬೀಳಲೇಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

"ನಾನು ಡಿಸಿಎಂ ನೀಡಿದ ಹೇಳಿಕೆಗೆ ದನಿಗೂಡಿಸುತ್ತೇನೆ"

Update: 2025-08-15 21:22 IST

ಉಡುಪಿ: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಷಡ್ಯಂತ್ರಗಳಿಗೆ ಪೂರ್ಣ ವಿರಾಮ ಬೀಳಲೇಬೇಕು ಎಂದಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಈ ವಿಷಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅಜ್ಜರಕಾಡು ಮೈದಾನದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ನಾವೆಲ್ಲ ಧರ್ಮಸ್ಥಳದ ಮಂಜುನಾಥನ ಭಕ್ತರು. ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಬದ್ಧತೆ, ಕಾಳಜಿಯನ್ನು, ಅಲ್ಲಿನ ಕೆಲಸ ಮೆಚ್ಚಿಕೊಂಡವರು. ಇದೀಗ ಎಸ್‌ಐಟಿ ತನಿಖೆ ನಡೆಯುತ್ತಿದೆ. ಷಡ್ಯಂತ್ರದ ಬಗ್ಗೆ ಡಿಸಿಎಂ ಅವರಿಗೆ ಗೊತ್ತಿದೆ. ನಾನು ಅವರು ನೀಡಿದ ಹೇಳಿಕೆಗೆ ದನಿಗೂಡಿಸುತ್ತೇನೆ ಎಂದರು.

ವಿಧಾನಸಭೆಯ ಒಳಗೂ, ಹೊರಗೂ ಡಿಕೆಶಿ ಅವರು ಇದೊಂದು ಷಡ್ಯಂತ್ರ ಅಂತ ಹೇಳಿದ್ದಾರೆ. ಎಲ್ಲದಕ್ಕೂ ಪೂರ್ಣವಿರಾಮ ಬೇಕು ಎಂದು ಹೇಳಿದ್ದಾರೆ. ಷಡ್ಯಂತ್ರ ಮಾಡಿದವರಿಗೆ ಅಲ್ಲಿ ಏನೂ ಇಲ್ಲ ಎಲ್ಲ ಬೋಗಸ್ ಎಂಬುದು ಗೊತ್ತಾಗಬೇಕು. ಜನರ ಎದುರು ಸತ್ಯಾಂಶ ಬಹಿರಂಗಗೊಳ್ಳಬೇಕು ಎಂದರು.

ರಾಜ್ಯ ಸರಕಾರವೇ ಎಸ್‌ಐಟಿ ತನಿಖೆಗೆ ಪ್ರಕರಣವನ್ನು ನೀಡಿದ ಬಳಿಕ ಇಲ್ಲಿ ಷಡ್ಯಂತ್ರ ಯಾರಿಂದ ಎಂದು ಪ್ರಶ್ನಿಸಿದಾಗ, ತನಿಖೆ ಪ್ರಾರಂಭಗೊಂಡ ಬಳಿಕ ಸೋಶಿಯಲ್ ಮೀಡಿಯಾಗಳಲ್ಲಿ ಧರ್ಮಸ್ಥಳದ ಬಗ್ಗೆ ನಡೆದಿರುವ ಅಪಪ್ರಚಾರವನ್ನು ನೀವೂ ಗಮನಿಸಿರಬಹುದು. ಕಳೆದ 10 ದಿನಗಳಿಂದ ದೇವಸ್ಥಾನದ ವಿರುದ್ಧ, ಧರ್ಮಾಧಿಕಾರಿಗಳ ವಿರುದ್ಧವೇ ಪ್ರಚೋದನಕಾರಿಯಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೆಗಳು ಬರುತ್ತಿರುವುದನ್ನು ಗಮನಿಸಿರಬಹುದು ಎಂದರು.

ಸೌಜನ್ಯ ವಿಚಾರದಲ್ಲಿ ಒಬ್ಬ ಹೆಣ್ಣುಮಗಳಾಗಿ ನಾನು ಅವಳಿಗೆ ನ್ಯಾಯಕ್ಕೆ ಒತ್ತಾಯಿಸುತ್ತೇನೆ. ಆದರೆ ಈ ಅನಾಮಿಕ ಯಾರು? ಇವತ್ತು ಇಲ್ಲಿ ತೋರಿಸ್ತಾನೆ, ನಾಳೆ ಅಲ್ಲಿ ಇದೆ ಅಂತಾನೆ. ಇದಕ್ಕೆಲ್ಲ ಆದಷ್ಟು ಬೇಗ ಒಂದು ಪೂರ್ಣ ವಿರಾಮ ಹಾಕಬೇಕು ಎಂದು ಗೃಹ ಸಚಿವರನ್ನು ನಾನು ಒತ್ತಾಯಿಸುತ್ತೇನೆ ಎಂದು ಹೆಬ್ಬಾಳ್ಕರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News